ಮುಡಾದಿಂದ ಡಿಪಿಆರ್ ಟೆಂಡರ್‌ಗೆ ಪ್ರಸ್ತಾವನೆ: ೫ ಕೋಟಿ ರೂ.ಗೆ ಸಿಕ್ಕಿದೆ ಅನುಮೋದನೆ
ಮೈಸೂರು: ಮುಡಾದಿಂದ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ(ಫೆರಿಫೆರಲ್ ರಿಂಗ್ ರೋಡ್)ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿಯನ್ನು(ಡಿಪಿಆರ್) ತಯಾರಿಕೆಗೆ ಟೆಂಡರ್ ನೀಡುವುದಕ್ಕೆ ಒಪ್ಪಿಗೆ ನೀಡಲು ಪ್ರಸ್ತಾವನೆಯನ್ನು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿದೆ.
ಫೆರಿಫರಲ್ ರಿಂಗ್ ರೋಡ್ ಸಿಟಿ ಡೆವಲಪ್‌ಮೆಂಟ್ ಪ್ಲ್ಯಾನ್-೨೨ ಅನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ವಾರ ಅಥವಾ ೧೫ ದಿನಗಳ ಒಳಗೆ ಅನುಮತಿ ದೊರೆಯಲಿದೆ. ಸರ್ಕಾರದಿಂದ ಒಪ್ಪಿಗೆ ಸಿಗುತ್ತಿದ್ದಂತೆ ಶೀಘ್ರದಲ್ಲಿಯೇ ಟೆಂಡರ್ ಕರೆಯುವುದಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.
ಹೊರ ವರ್ತುಲ ರಸ್ತೆ ಡಿಪಿಆರ್ ಸಿದ್ಧಪಡಿಸಲು ಮುಡಾ ಬಜೆಟ್‌ನಲ್ಲಿ ೫ ಕೋಟಿ ರೂ. ಮೀಸಲಿಡಲಾಗಿತ್ತು. ಮುಂದಿನ ೩೦ ವರ್ಷಗಳ ಮೈಸೂರು ನಗರದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹೊರ ವರ್ತುಲ ರಸ್ತೆ ನಿರ್ಮಿಸಲಾಗುವುದು ಎಂದು ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ತಿಳಿಸಿದ್ದಾರೆ.
೭೩.೨೫ ಕಿ.ಮೀ ರಸ್ತೆ: ಹೊರ ವರ್ತುಲ ರಸ್ತೆಯಲ್ಲಿ ೪೩ ಮೀಟರ್ ಅಗಲ, ೭೩.೨೫ ಕಿ.ಮೀ. ಇರಲಿದೆ. ಇದಕ್ಕಾಗಿ ೮೨೪ ಎಕರೆ ಪ್ರದೇಶ ಬೇಕಾಗುತ್ತದೆ. ಮುಡಾ ಟೌನ್ ಪ್ಲ್ಯಾನಿಂಗ್ ಸ್ಕೀಂನಲ್ಲಿ ೭೫೦ ಎಕರೆ ಗುರುತಿಸಲಾಗಿದೆ. ಹೊರ ವರ್ತುಲ ರಸ್ತೆಯಲ್ಲಿ ೬ ಮುಖ್ಯರಸ್ತೆ, ೪ ಸರ್ವೀಸ್ ರಸ್ತೆ ಇರಲಿದೆ.
ಪ್ರಸ್ತುತ ೪೨.೫ ಕಿ.ಮೀ. ವಿಸ್ತೀರ್ಣ ೬ ಲೈನ್ ವರ್ತುಲ ರಸ್ತೆ ಬೆಂಗಳೂರು-ಮೈಸೂರು ಹೈವೇ, ಕೆಆರ್‌ಎಸ್ ರಸ್ತೆ, ಹುಣಸೂರು ಹೈವೇ, ಬೋಗಾದಿ ರಸ್ತೆ, ಎಚ್.ಡಿ.ಕೋಟೆ ರಸ್ತೆ, ನಂಜನಗೂಡು ರಸ್ತೆ, ತಿ.ನರಸೀಪುರ ರಸ್ತೆ, ಬನ್ನೂರು ಮತ್ತು ಮಹದೇವಪುರ ರಸ್ತೆಗಳೂ ಸೇರಿವೆ.
ಹೊರ ವರ್ತುಲ ರಸ್ತೆ ವ್ಯಾಪ್ತಿಗೆ ಮೈಸೂರು-ಬೆಂಗಳೂರು ದಶಪಥ ರಸ್ತೆ, ಮೈಸೂರು-ಬನ್ನೂರು ರಸ್ತೆಯಲ್ಲಿರುವ ಕೃಷಿ ಭೂಮಿ, ಮೊಸಂಬಾಯನಹಳ್ಳಿ ರಸ್ತೆ, ಮೈಸೂರು-ಊಟಿ ರಸ್ತೆ, ಕಡಕೊಳ ಜಯಪುರ ರಸ್ತೆ, ಮೈಸೂರು ಮಾನಂದವಾಡಿ ರಸ್ತೆ, ಕೆಎಚ್‌ಬಿ ಲೇಔಟ್ ರಸ್ತೆ, ಜ್ಞಾನಗಂಗಾ ಲೇಔಟ್, ಬಲ್ಲಹಳ್ಳಿ ಲೇಔಟ್, ಹುಯಿಲಾಳು ಲೇಔಟ್, ನಾಗವಾಲ-ಇಲವಾಲ ರಸ್ತೆ ಮತ್ತು ಇಲವಾಲ-ಪಶ್ಚಿಮ ವಾಹಿನಿ ರಸ್ತೆ ಸೇರಿಲಿದೆ.
ಮುಡಾ ಅಧೀಕ್ಷಕ ಅಭಿಯಂತರು,ನಗರ ಯೋಜಕ ಸದಸ್ಯರು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ,ಆಯುಕ್ತರನ್ನು ಭೇಟಿ ಮಾಡಿ ಡಿಪಿಆರ್ ತಯಾರಿಸಲು ಖಾಸಗಿ ಏಜೆನ್ಸಿಗಳಿಗೆ ಟೆಂಡರ್ ನೀಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮೈಸೂರು ಭೇಟಿ ವೇಳೆ ಹೊರ ವರ್ತುಲ ರಸ್ತೆಯನ್ನು ಭಾರತ್ ಮಾಲಾ ಪರಿಯೋಜನಾ ಫೇಸ್-೨ರಲ್ಲಿ ಸೇರಿಸುವಂತೆ ಮನವಿ ಮಾಡಲಾಗಿದೆ. ಸಂಸದ ಪ್ರತಾಪ್ ಸಿಂಹ ಅವರು ಹೊರ ವರ್ತುಲ ರಸ್ತೆಯ ವಿಸ್ತೃತ ಯೋಜನೆ ವರದಿ ಸಿದ್ಧಪಡಿಸಲು ೧೦ ಕೋಟಿ ರೂ. ಮೀಸಲಿಡಲು ಮುಡಾಗೆ ನಿರ್ದೇಶನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಒತ್ತಾಯಿಸಿದ್ದನ್ನು ಸ್ಮರಿಸಬಹುದು.
೪೦ ಹಳ್ಳಿಗಳ ಸೇರ್ಪಡೆ
ಉದ್ದೇಶಿತ ಹೊರ ವರ್ತುಲ ರಸ್ತೆಗೆ ಮೈಸೂರು ಹೊರ ಭಾಗದಲ್ಲಿರುವ ಸುಮಾರು ೪೦ ಹಳ್ಳಿಗಳು ಸೇರ್ಪಡೆಯಾಗಲಿವೆ. ಯೋಜನೆ ಮತ್ತು ಭೂ ಸ್ವಾಧೀನಕ್ಕೆ ಅಂದಾಜು ೧೯೭೧ ಕೋಟಿ ರೂ. ಅವಶ್ಯವಿದೆ ಎಂದು ಮುಡಾ ಅಂದಾಜಿಸಿರುವ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ಹೊರ ವರ್ತುಲ ರಸ್ತೆ ಹೇಗೆ ?
ಮೈಸೂರಿನಿಂದ ೨೫ ಕಿ.ಮಿ. ದೂರದಲ್ಲಿ ರೂಪುಗೊಳ್ಳಬಹುದು.
೭೩.೨೫ ಕಿ.ಮೀ ಉದ್ದ ಇರುವ ಅಂದಾಜಿದೆ
೬ ಮುಖ್ಯರಸ್ತೆ, ೪ ಸರ್ವೀಸ್ ರಸ್ತೆ
೮೨೪ ಎಕರೆ ಭೂಸ್ವಾಧೀನವಾಗುವ ನಿರೀಕ್ಷೆ
೧೯೭೧ ಕೋಟಿ ರೂ. ಅಂದಾಜು ಯೋಜನೆ
ಮೈಸೂರು, ಶ್ರೀರಂಗಪಟ್ಟಣ ತಾಲ್ಲೂಕಿನ ೪೦ ಹಳ್ಳಿಗಳ ಸೇರ್ಪಡೆ ಸಾಧ್ಯತೆ
ಡಿಪಿಆರ್‌ಗೆ ಟೆಂಡರ್
ಫೆರಿಫೆರಲ್ ರಿಂಗ್ ರಸ್ತೆ ಡಿಪಿಆರ್ ತಯಾರಿಸಲು ಟೆಂಡರ್ ಕರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಟೆಂಡರ್‌ನಿಂದ ಒಂದೊಂದು ಏಜೆನ್ಸಿಯವರು ಮೂರು,ಐದು ಕೋಟಿ ರೂ.ಸೇರಿದಂತೆ ತಮ್ಮ ಅನುಕೂಲಕ್ಕೆ ತಕ್ಕಂತೆ ಟೆಂಡರ್‌ನಲ್ಲಿ ಹಣದ ಮೊತ್ತವನ್ನು ಕೋಟ್ ಮಾಡಲಿದ್ದಾರೆ.
-ಜಿ.ಟಿ.ದಿನೇಶ್‌ಕುಮಾರ್,ಆಯುಕ್ತರು,ಮುಡಾ.