ಕಾಡಾನೆ ಜತೆಗಿನ ಕಾದಾಟದಲ್ಲಿ ದಾರುಣ ಸಾವು ಕಂಡ ಸಾಕಾನೆ
ಮೈಸೂರು: ಎರಡು ತಿಂಗಳ ಹಿಂದಷ್ಟೇ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ದಸರಾ ಆನೆ ಗೋಪಾಲಸ್ವಾಮಿ ಕಾಡಾನೆಯೊಂದಿಗೆ ಕಾದಾಟಕ್ಕಿಳಿದು ದಾರುಣ ಮೃತ್ಯು ಕಂಡಿದೆ.
ಹುಣಸೂರು ತಾಲ್ಲೂಕಿನ ಮತ್ತಿಗೋಡು ಆನೆ ಶಿಬಿರದಲ್ಲಿದ್ದ ಗೋಪಾಲ ಸ್ವಾಮಿಯನ್ನು ಕಾಡಿಗೆ ಬಿಡಲಾಗಿತ್ತು. ತಾಲ್ಲೂಕಿನ ಹನಗೋಡು ಸಮೀಪದ ಕೊಳವಿಗೆ ಎಂಬಲ್ಲಿ ಇತ್ತೀಚೆಗಷ್ಟೇ ಸೆರೆ ಹಿಡಿಯಲಾಗಿದ್ದ ಅಯ್ಯಪ್ಪ ಎಂಬ ಆನೆಯ ಜತೆ ಮಂಗಳವಾರ ಕಾದಾಟಕ್ಕಿಳಿದು ಪ್ರಾಣ ಕಳೆದುಕೊಂಡಿದೆ.
ಕಾದಾಟದ ವೇಳೆ ಗೋಪಾಲಸ್ವಾಮಿ ಆನೆ ಮಸ್ತಿಯಲ್ಲಿತ್ತು ಎನ್ನಲಾಗಿದೆ. ಗಾಯಗೊಂಡಿದ್ದ ಆನೆಯನ್ನು ಉಳಿಸಲು ವೈದ್ಯರು ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ.
41 ವರ್ಷಗಳ ಗೋಪಾಲ ಸ್ವಾಮಿ ಆನೆ 2012 ರಿಂದ ಮೈಸೂರು ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಆನೆಯನ್ನು 2009 ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಾರೆಕೊಪ್ಪಿ ಅರಣ್ಯದಲ್ಲಿ ಸೆರೆಹಿಡಿಯಲಾಗಿತ್ತು.
ಕಾಡಾನೆ ಮತ್ತು ಹುಲಿಯನ್ನು ಸೆರೆಹಿಡಿಯುವ ನೂರಾರು ಕಾರ್ಯಾಚರಣೆಗಳಲ್ಲಿ ಗೋಪಾಲಸ್ವಾಮಿ ಭಾಗಿಯಾಗಿತ್ತು. ಮಂಜು ಜೆ ಡಿ ಈ ಆನೆಯ ಮಾವುತನಾಗಿ ಕೆಲಸ ಮಾಡುತ್ತಿದ್ದರು. ಸೃಜನ್ ತರಬೇತುದಾರರಾಗಿದ್ದರು. 2.85 ಮೀ ಎತ್ತರದ ಈ ಆನೆ 3.42 ಮೀ ಉದ್ದವಿತ್ತು. ಈ ಬಾರಿಯ ದಸರಾದಲ್ಲಿ 5,140 ತೂಕ ದಾಖಲಿಸಿತ್ತು.