Mysore
25
overcast clouds
Light
Dark

ಮೈಸೂರು : ನಾಲಾಬೀದಿಯಲ್ಲಿ ಮುಗಿಯದ ಕಾಮಗಾರಿ

ಈ ರಸ್ತೆಯಲ್ಲಿ ಎರಡು ಆಸ್ಪತ್ರೆಗಳಿದ್ದು ಗರ್ಭಿಯರು ಓಡಾಡಂದತಹ ಸ್ಥಿತಿ ನಿರ್ಮಾಣವಾಗಿದೆ

ಆರ್.ಎಸ್.ಆಕಾಶ್

ಮೈಸೂರು: ಸುಣ್ಣದಕೇರಿಯ ನಾಲಾಬೀದಿಯಲ್ಲಿ ಯುಜಿಡಿ ಮತ್ತು ಚರಂಡಿ ದುಸ್ಥಿತಿಯಲ್ಲಿದ್ದು, ಸ್ಥಳೀಯರ ಅಹವಾಲು ಆಲಿಸದೆ ನಗರಪಾಲಿಕೆ ಕಣ್ಣುಮುಚ್ಚಿ ಕುಳಿತಿದೆ.

ಸುಣ್ಣದಕೇರಿಯ ನಾಲಾಬೀದಿಯಲ್ಲಿ ಯುಜಿಡಿ ಹಾಗೂ ಚರಂಡಿ ದುರಸ್ತಿಯಲ್ಲಿದ್ದು, ರಸ್ತೆ ಸಂಪರ್ಕವೇ ಕಡಿತವಾಗಿದೆ. ಇದರಿಂದ ಜನರಿಗೆ ಓಡಾಡಲು ತೊಂದರೆಯಾಗುತ್ತಿದೆ. ೬ ತಿಂಗಳ ಹಿಂದೆ ಯಜಿಡಿ ಲೈನ್ ಮಾಡಲು ಕಾಮಗಾರಿ ಆರಂಭಿಸಿದ್ದು, ಅದನ್ನು ಪೂರ್ಣಗೊಳಿಸದೆ ಪಾಲಿಕೆಯವರು ಹಾಗೇ ಬಿಟ್ಟಿದ್ದಾರೆ. ಈಗ ಚರಂಡಿ ನಿರ್ಮಾಣಕ್ಕೆ ಕೈ ಹಾಕಿದ್ದು, ಅದೂ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಚಾಮರಾಜ ಜೋಡಿ ರಸ್ತೆಯಿಂದ ಅಗ್ರಹಾರದ ವಾಣಿವಿಲಾಸ ರಸ್ತೆಯನ್ನು ಸಂಪರ್ಕಕಿಸುವ ರಸ್ತೆಯಾಗಿದ್ದು, ಮುಗಿಯದ ಕಾಮಗಾರಿಯಿಂದ ಸ್ಥಳೀಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಡಾವಣೆಯ ಮನೆಗಳಿಗೆ ಸುರಂಗದ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಸಂಪರ್ಕಿತ ವೈರ್‌ಗಳಿಗೆ ಹಾನಿಯಾಗಿದ್ದು, ಅದನ್ನು ನಿವಾಸಿಗಳೇ ಸ್ವಂತ ಖರ್ಚಿನಲ್ಲಿ ಸರಿಪಡಿಸಿಕೊಳ್ಳುವಂತೆ ಸೂಚಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕಾಮಗಾರಿ ಅಪೂರ್ಣವಾಗಿರುವುದರಿಂದ ಮಳೆ ಬಂದಾಗ ಕಾಮಗಾರಿಗೆಂದು ತೆಗೆದಿರುವ ಗುಂಡಿಗಳಲ್ಲಿ ಮಳೆ ನೀರು ನಿಂತು ಕಲುಷಿತಗೊಳ್ಳುತ್ತಿದೆ. ಅದರಿಂದ ಸೊಳ್ಳೆ ಸಂತತಿ ಹೆಚ್ಚಾಗಿ ರೋಗರುಜಿನಗಳಿಗೆ ಎಡೆಮಾಡಿಕೊಡುತ್ತದೆ. ಅದೇ ರಸ್ತೆಯಲ್ಲಿರುವ ಆಯುರ್ವೇದ ಆಸ್ಪತ್ರೆ ಮುಂಬಾಗಿಲಿಗೆ ಕಲುಷಿತ ನೀರು ತಾಗುತ್ತಿದೆ. ಇದರಿಂದ ದುರ್ವಾಸನೆ ಬೀರುತ್ತಿದೆ. ಕೆ.ಆರ್.ಕ್ಷೇತ್ರ ಶಾಸಕರು ಮತ್ತು ಈ ವಾರ್ಡಿನ ನಗರಪಾಲಿಕೆ ಸದಸ್ಯರು ಇತ್ತ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ನಮಗೆ ಬಹಳ ಸಮಸ್ಯೆಯಾಗುತ್ತಿದೆ. ಇಲ್ಲಿನ ಜನರಿಗೆ ಇದರಿಂದ ಓಡಾಡಲು ತೊಂದರೆಯಾಗುತ್ತಿದೆ. ಮಳೆ ಬಂದರೆ ನೀರೆಲ್ಲಾ ಶೇಖರಣೆಯಾಗುದೆ; ಸೊಳ್ಳೆಗಳ ಸಂತತಿ ಹೆಚ್ಚುತ್ತಿದೆ.

– ಗಣೇಶ್, ಸ್ಥಳೀಯರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ