ಮೈಸೂರು : ಜೆಎಸ್ ಎಸ್ ಮಹಾವಿದ್ಯಾಪೀಠದ ೨೩ನೇ ಪೀಠಾಧಿಪತಿ ಡಾ. ರಾಜೇಂದ್ರ ಸ್ವಾಮೀಜಿ ಅವರ ಜನ್ಮ ಜಯಂತಿಯನ್ನು ಆಗಸ್ಟ್ ೧೮ರಂದು ಚಾಮುಂಡಿ ಬೆಟ್ಟದ ತಪ್ಪಲಿನ ಪುತ್ತೂರು ಮಠದಲ್ಲಿ ಆಯೋಜಿಸಲಾಗಿದೆ.
ಈ ವರ್ಷ ಅಮೆರಿಕದ ಮೇರಿಲ್ಯಾಂಡ್‌ನ ಗೇಥರ್ಸ್ ಬರ್ಗ್ ನಲ್ಲಿರುವ ಜೆಎಸ್ ಎಸ್ ಸ್ಪಿರಿಚ್ಯುಯಲ್ ಮಿಷನ್ ನಲ್ಲಿ ಆಚರಿಸುತ್ತಿರುವ ಹಿನ್ನಲೆಯಲ್ಲಿ ಶ್ರೀ ಮಠದಲ್ಲಿ ಮುಂಚಿತವಾಗಿ ಆಚರಿಸಲಾಗುತ್ತದೆ ಎಂದು ಜೆಎಸ್ ಎಸ್ ಮಹಾವಿದ್ಯಾಪೀಠದ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಡಾ.ಸಿ.ಜಿ.ಬೆಟಸೂರಮಠ ಹೇಳಿದರು.
ಆ.೧೮ರಂದು ಸುತ್ತೂರುಮಠದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ರಾಜ್ಯಪಾಲಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದು,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ,ಶಾಸಕ ಎಸ್.ಎ.ರಾಮದಾಸ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಶ್ರೀಗಳ ಜನ್ಮ ಜಯಂತಿ ಅಂಗವಾಗಿ ಚಾಮರಾಜೇಂದ್ರ ಮೃಗಾಲಯಕ್ಕೆ ಪ್ರತಿ ವರ್ಷದಂತೆ ಈ ಬಾರಿಯೂ ಒಂದು ಲಕ್ಷ ರೂ.ಗಳ ಚೆಕ್ ನೀಡಲಾಗುತ್ತದೆ. ರಕ್ತದಾನ,ನೇತ್ರದಾನ,ದೇಹದಾನಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದರು. ಕಾರ್ಯದರ್ಶಿ ಎಸ್.ಶಿವಕುಮಾರಸ್ವಾಮಿ, ಬಿ.ನಿರಂಜನಮೂರ್ತಿ ಹಾಜರಿದ್ದರು.