ಮೈಸೂರು: ಚಿತ್ರದುರ್ಗದ ಮುರುಘಾ ರಾಜೇಂದ್ರ ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಪ್ರಕರಣ ದಾಖಲಾದ ಬೆನ್ನಿಗೇ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮುರುಘಾ ಮಠದ ಆಡಳಿತಾಧಿಕಾರಿ ಎಸ್ .ಕೆ. ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ಬಸವರಾಜನ್ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಆಡಳಿತಾಧಿಕಾರಿ ಬಸವರಾಜನ್ ಅವರು ಪರಿಶೀಲನೆ ನೆಪದಲ್ಲಿ ಕೊಠಡಿಗೆ ಪ್ರವೇಶಿಸಿ ಕಿರುಕುಳ ನೀಡುತ್ತಿದ್ದರು. ದೇಹದ ಅಂಗಾಂಗಗಳನ್ನು ಮುಟ್ಟಿ ಹಿಂಸೆ ನೀಡುತ್ತಿದ್ದರು. ಬಲಾತ್ಕಾರಕ್ಕೆ ಯತ್ನಿಸಿದಾಗ ಪ್ರತಿರೋಧ ತೋರಲಾಯಿತು. ಇದರಿಂದ ಕುಪಿತಗೊಂಡ ಅವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
ಮಠದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರಿಬ್ಬರು ವೈಯಕ್ತಿಕ ಕಾರಣ ನೀಡಿ ಹಾಸ್ಟೆಲ್ ನಿಂದ ಹೊರ ಹೋಗಿದ್ದರು. ಆದರೆ, ಅವರು ಮನೆಗೆ ತೆರಳದೆ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆ ತಲುಪಿದ್ದರು. ಈ ಬಗ್ಗೆ ಮಕ್ಕಳ ಹೆತ್ತವರಿಗಾಗಲೀ, ಮಠಕ್ಕಾಗಲೀ ಮಾಹಿತಿ ನೀಡದೆ ಬಸವರಾಜನ್ ಮಕ್ಕಳನ್ನು ಕರೆತಂದು ಅಕ್ರಮವಾಗಿ ಮನೆಯಲ್ಲಿ ಇಟ್ಟುಕೊಂಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.