ಹನೂರು :ಮಲೆ ಮಾದೇಶ್ವರ ಬೆಟ್ಟದ ದೇವಾಲಯದ ಸಮೀಪ ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ಬೆಳ್ಳಿರಥ ನಿರ್ಮಾಣ ಸ್ಥಳಕ್ಕೆ ಶಾಸಕ ಆರ್. ನರೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಸ್ತೆ ಅಭಿವೃದ್ಧಿ ಸಂಬಂಧ ಭೂಮಿ ಪೂಜೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮಲೆ ಮಾದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಬೆಳ್ಳಿ ರಥ ನಿರ್ಮಾಣ ಕಾರ್ಯದ ಬಗ್ಗೆ ಶಿಲ್ಪಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಶಾಸಕ ಆರ್ ನರೇಂದ್ರ ಮಾತನಾಡಿ ಶ್ರೀ ಕ್ಷೇತ್ರದಲ್ಲಿ ಚಿನ್ನದ ರಥೋತ್ಸವ ರುದ್ರಾಕ್ಷಿ ಮಂಟಪ, ಬಸವ ವಾಹನ, ಮಹದೇಶ್ವರ ರ ವಾಹನದ ಸೇವೆ ಭಕ್ತರಿಗೆ ಲಭ್ಯವಿತ್ತು. ಕಾಣಿಕೆ ರೂಪದಲ್ಲಿ ಭಕ್ತಾದಿಗಳು ನೀಡಿದ್ದ ಬೆಳ್ಳಿಯನ್ನು ಗಮನದಲ್ಲಿಟ್ಟುಕೊಂಡು ಬೆಳ್ಳಿರಥ ನಿರ್ಮಾಣ ಮಾಡುವ ಉದ್ದೇಶವಿತ್ತು. ಮಲೆ ಮಾದೇಶ್ವರ ಭಕ್ತರು ಕಾಣಿಕೆಯಾಗಿ ನೀಡಿರುವ ಸುಮಾರು 530 ಕೆಜಿ ಬೆಳ್ಳಿ ಬಳಸಿಕೊಂಡು ರಥೋತ್ಸವ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಒಂದು ತಿಂಗಳಿನಲ್ಲಿ ರಥೋತ್ಸವ ಕಾಮಗಾರಿ ಪೂರ್ಣಗೊಳ್ಳಲಿದೆ. ತದನಂತರ ವಿಧಿ ವಿಧಾನಗಳೊಂದಿಗೆ ವಿಶೇಷ ಹೋಮ ಹವನ ಪೂಜೆ ಸಲ್ಲಿಸಿ ಮುಖ್ಯಮಂತ್ರಿ ಅವರನ್ನು ಕರೆತಂದು ಬೆಳ್ಳಿ ರಥವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಬಸವರಾಜು, ದ್ವಿತೀಯ ದರ್ಜೆ ಸಹಾಯಕ ಸರಗೂರು ಮಹದೇವಸ್ವಾಮಿ ಹಾಗೂ ಪ್ರಾಧಿಕಾರದ ಸಿಬ್ಬಂದಿ ವರ್ಗದವರು ಹಾಜರಿದ್ದರು.