Light
Dark

ಮಠವನ್ನು ಸ್ಥಾಪಿಸುವುದರ ಮೂಲಕ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು : ಸಚಿವ ಬಿ.ಸಿ ನಾಗೇಶ್

ಹನೂರು: ಭಕ್ತರ ಸೇವೆಗಾಗಿ ಮಠವನ್ನು ಸ್ಥಾಪಿಸುವುದರ ಜತೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಸಾಲೂರು ಮಠದ ಸೇವಾ ಕಾರ್ಯ ಶ್ಲಾಘನೀಯ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

ಮಲೆಮಹದೇಶ್ವರ ಬೆಟ್ಟದ ಶ್ರೀ ಮಲೆಮಹದೇಶ್ವರ ಸ್ವಾಮಿ ಕೃಪಾ ಎಜ್ಯುಕೇಷನಲ್ ಸೊಸೈಟಿ ವತಿಯಿಂದ ಶ್ರೀ ಮಹದೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ಧ ಸಾಂಸ್ಕೃತಿಕೋತ್ಸವ ಕಾರ್ಯಕ್ರಮವನ್ನು ಗಿಡಕ್ಕೆ ನಿರೇರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಾಲೂರು ಬೃಹನ್ಮಠವು ತನ್ನದೇಯಾದ ಗುರುಪರಂಪರೆಯನ್ನು ಹೊಂದಿದ್ದು, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಾ ಬರುತ್ತಿದೆ. ಈ ಭಾಗವು ಬಹುತೇಕ ಕಾಡಂಚಿನಿಂದ ಕೂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಡವರ್ಗದ ಕುಟುಂಬಗಳಿವೆ. ಈ ಹಿಂದೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಇದನ್ನು ಮನಗಂಡು ಮಠವು ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಶಿಕ್ಷಣ ಸಂಸ್ಥೆಗಳನ್ನು ತೆರೆದು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಮೆಚ್ಚುಗೆಯ ಸಂಗತಿ.ಜತೆಗೆ ಮಲೆ ಮಹದೇಶ್ವರರು ತಪೋವನಗೈದ ಶ್ರೀ ಕ್ಷೇತ್ರದಲ್ಲಿ
ಮಕ್ಕಳಲ್ಲಿ ಸುಸಂಸ್ಕೃತೆಯನ್ನು ಉತ್ತೇಜಿಸುವ ಸದುದ್ದೇಶದಿಂದ ಸಂಸ್ಕೃತ ಶಿಕ್ಷಣ ಸಂಸ್ಥೆಯನ್ನು ತೆರೆದಿರುವುದು ಉತ್ತಮ ಬೆಳವಣಿಗೆ. ಆದ್ದರಿಂದ ಶ್ರೀ ಮಠವು ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದು, ಮತ್ತಷ್ಟು ಅಭಿವೃದ್ದಿ ಹೊದಲಿ ಎಂದು ತಿಳಿಸಿದರು.

ಧೂಪ ಮಾರಿಸಬೇಡಿ: ಮಕ್ಕಳು ದೇಶದ ಭವಿಷ್ಯವನ್ನು ರೂಪಿಸುವ ರೂವಾರಿಗಳು. ಆದರೆ ಮ.ಬೆಟ್ಟದಲ್ಲಿ ಬಹುತೇಕ ಪಾಲಕರು ಜಾತ್ರೆ, ಹಬ್ವ ಹರಿದಿನ ಹಾಗೂ ಇನ್ನಿತರೆ ವಿಶೇಷ ಸಂದರ್ಭದಲ್ಲಿ ಮಕ್ಕಳನ್ನು ಧೂಪ ಮಾರಾಟ ಮಾಡಲು ಕಳುಹಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಇದರಿಂದ ಮುಂದಿನ ದಿನಗಳಲ್ಲಿ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಪಾಲಕರು ಈ ಬಗ್ಗೆ ಮನದಟ್ಟು ಮಾಡಿಕೊಂಡು ಮಕ್ಕಳನ್ನು ಧೂಪ ಮಾರಾಟಕ್ಕೆ ಕಳುಹಿಸದಂತೆ ನೋಡಿಕೊಳ್ಳಬೇಕು. ಈ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿ ಉದ್ಯೋಗವಂತರನ್ನಾಗಿ ಮಾಡಬೇಕು ಎಂದು ತಿಳಿಸಿದರು.

ಸಾಲೂರು ಬೃಹನ್ಮಠದ ಪೀಠಾಧಿಪತಿ ವಿದ್ವಾನ್ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಪ್ರತಿ ವರ್ಷ ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು
ಆದರೆ ಕೋವಿಡ್ ಹಿನ್ನಲೆ ಕಳೆದ 2 ವರ್ಷದಿಂದ ಆಚರಿಸಲು ಸಾಧ್ಯವಾಗಿರಲಿಲ್ಲ .ಇದೀಗ ಆಚರಿಸಲಾಗುತ್ತಿದೆ ಎಂದ ಅವರು ಮಕ್ಕಳಲ್ಲಿ ಸತ್ ಚಾರಿತ್ರ ಉಂಟು ಮಾಡಬೇಕಾದರೆ ಪ್ರತಿಯೊಂದು ಮಗುವೂ ಕೂಡ ಶಿಕ್ಷಣ ಪಡೆಬೇಕು. ಆದಾಗ ಮಾತ್ರ ಸುಸಂಸ್ಕೃತ ವ್ಯಕ್ತಿಯಾಗಲು ಸಾಧ್ಯ. ಆದ್ದರಿಂದ ಪಾಲಕರು ಈ ಬಗ್ಗೆ ಮನದಟ್ಟು ಮಾಡಿಕೊಂಡು ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ನಿವೃತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತಲ್ಲದೇ ಸಾಂಸ್ಕೃತಿಕ ಹಾಗೂ ಕ್ರೀಡಾ ಪಂದ್ಯಾವಳಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಜನರಲ್ಲಿ ಮನರಂಜನೆ ನೀಡಿತು.

ಈ ಸಂದರ್ಭದಲ್ಲಿ ತಮಿಳುನಾಡಿನ ಬರಗೂರು ದ್ರೋಣಮಠದ ಅಶೋಕ ರಾಜೇಂದ್ರ ಸ್ವಾಮೀಜಿ, ಗುಂಡೇಗಾಲ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್ ದತ್ತೇಶ್ ಕುಮಾರ್, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿದೇವಿ, ಉಪ ಕಾರ್ಯದರ್ಶಿ ಬಸವರಾಜು, ಲೆಕ್ಕಾಧೀಕ್ಷಕ ಪ್ರವೀಣ್ ಪಟೇಲ್, ತಹಸೀಲ್ದಾರ್ ಆನಂದಯ್ಯ, ಡಿಡಿಪಿಐಗಳಾದ ಮಂಜುನಾಥ್, ನಾಗಮಲ್ಲೇಶ್, ಡಯಟ್ ಪ್ರಾಂಶುಪಾಲ ಪಾಂಡು, ಬಿಇಒ ಶಿವರಾಜು, ಶಾಲಾ ಕಾಲೇಜಿನ ಶಿಕ್ಷಕರು, ಉಪನ್ಯಾಸಕರು, ಬೇಡಗಂಪಣ ಅರ್ಚಕರು, ಪ್ರಾಧಿಕಾರದ ನೌಕರರು ಹಾಗೂ ಇನ್ನಿತರರು ಇದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ