Mysore
30
few clouds

Social Media

ಮಂಗಳವಾರ, 03 ಫೆಬ್ರವರಿ 2026
Light
Dark

ಪರೀಕ್ಷೆ ಮುಗಿದ ದಿನವೇ ಫಲಿತಾಂಶ ಪ್ರಕಟಿಸಿದ ಮಹಿಳಾ ಸರ್ಕಾರಿ ಕಾಲೇಜು!

ಮಂಡ್ಯ : ನಗರದ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯುತ್ತ) ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು 2025-26ನೇ ಸಾಲಿನ ವಿವಿಧ ಪದವಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯವನ್ನು ದಾಖಲೆ ಸಮಯದಲ್ಲೇ ಮುಗಿಸಿ ಕೊನೆಯ ಪರೀಕ್ಷೆ ಮುಗಿದ ದಿನವೇ ಫಲಿತಾಂಶ ಪ್ರಕಟಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದು, ಸರ್ಕಾರಿ ಸಂಸ್ಥೆಯೊಂದು ಇಷ್ಟೊಂದು ವೇಗವಾಗಿ ಫಲಿತಾಂಶ ನೀಡಿರುವುದು ಕಾಲೇಜಿನ ಪರಿಶ್ರಮದ ಹೆಗ್ಗುರುತಾಗಿದೆ.

ಕಾಲೇಜಿನ ಬಿಎ, ಬಿಕಾಂ, ಬಿಬಿಎ, ಬಿಎಸ್ಸಿ, ಬಿಸಿಎ, ಬಿಎಫ್‌ಎಸ್‌ಐ, ಇ-ಕಾಮರ್ಸ್ ಪದವಿ ಪರೀಕ್ಷೆಗಳು ಕಳೆದ ಜ.2ರಿಂದ ಜ.31ರವರೆಗೆ ನಡೆದಿದ್ದವು. ಪರೀಕ್ಷೆಗಳು ಜ.31ರಂದು ಮುಕ್ತಾಯಗೊಂಡಿದ್ದು, ಅದೇ ದಿನ ಸಂಜೆ 4ಕ್ಕೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು. ವಿಶೇಷವೆಂದರೆ ಮೌಲ್ಯಮಾಪನ ಮುಗಿದ ಕೇವಲ ಒಂದೇ ಗಂಟೆಯಲ್ಲಿ (ಜ.31ರ ಸಂಜೆ 5 ಗಂಟೆ) ಕಾಲೇಜಿನ ಪ್ರಾಂಶುಪಾಲ ಪ್ರೊ.ಗುರುರಾಜ ಕೆ.ಪ್ರಭು ಅವರು ಫಲಿತಾಂಶವನ್ನು ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಶಿಸ್ತುಬದ್ಧ ಕೆಲಸ ಹಾಗೂ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದಾಗಿ ಈ ಸಾಧನೆಯು ನಮ್ಮ ಸರ್ಕಾರಿ ಪದವಿ ಕಾಲೇಜಿನಿಂದ ಸಾಧ್ಯವಾಗಿದೆ. ಈ ಕಾರ್ಯವನ್ನು ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ರವಿಕಾಂತ್ ಲಂಬಾಣಿ ಅವರು ಮತ್ತು ತಂಡ ಪರೀಕ್ಷೆ ಆರಂಭದಿಂದ ಮುಕ್ತಾಯದವರೆಗೂ ಸತತ ಪರಿಶ್ರಮ, ತಾಳ್ಮೆ, ಜಾಣ್ಮೆ, ಅತ್ಯಂತ ಶಿಸ್ತಿನಿಂದ ಶ್ರಮಿಸಿದ ಫಲವಾಗಿ ಪರೀಕ್ಷೆ ಮುಗಿದ ದಿನವೇ ಫಲಿತಾಂಶ ಪ್ರಕಟಿಸಲು ಸಹಕಾರಿಯಾಯಿತು ಎಂದರು.

ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ರವಿಕಾಂತ್ ಲಮಾಣಿ, ಮೌಲ್ಯಮಾಪನ ಸಂಯೋಜಕ ಎಂ.ಮಾದೇಗೌಡ, ಪರೀಕ್ಷಾ ಸಮಿತಿಯ ಸಂಚಾಲಕ ಡಾ. ವಿ.ಶಿವಕೀರ್ತಿ, ಸಹ ಸಂಚಾಲಕ ಡಾ. ಎಸ್.ಶಿವರಾಮು, ಪರೀಕ್ಷಾಂಗ ವಿಭಾಗದ ಸಿಬ್ಬಂದಿಗಳಾದ ಸಾಗರ್, ನವ್ಯಶ್ರೀ, ಪವಿತ್ರ, ಸಿಂಧುಶ್ರೀ ಅವರನ್ನು ಶ್ಲಾಘಿಸಿದ ಪ್ರಾಂಶುಪಾಲರು, ಈ ರೀತಿಯ ಫಲಿತಾಂಶ ಪ್ರಕಟಣೆ ವಿದ್ಯಾರ್ಥಿಗಳು, ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿಯಾಗಲಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯವನ್ನು ಯಶಸ್ವಿಯಾಗಿ ಮುಂದುವರಿಸುತ್ತೇವೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಸುಗಮ ಓದಿಗೆ ಈ ಫಲಿತಾಂಶ ಸಕಾರಾತ್ಮಕ ಪರಿಣಾಮ ಉಂಟುಮಾಡುತ್ತ ಎಂದು ಸಂತಸ ವ್ಯಕ್ತಪಡಿಸಿದರು.

ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ರವಿಕಾಂತ್ ಲಮಾಣಿ ಮಾತನಾಡಿ, ಈ ರೀತಿ ಮೌಲ್ಯಮಾಪನ ಮುಗಿದ ದಿನವೇ ಫಲಿತಾಂಶ ನೀಡಲು ಶ್ರಮಿಸಿದ ಪರೀಕ್ಷಾ ಸಮಿತಿಯ ಸಂಚಾಲಕರು, ಸದಸ್ಯರು, ಪರೀಕ್ಷಾಂಗ ವಿಭಾಗದ ಸಿಬ್ಬಂದಿ, ಮಂಡ್ಯ ಜಿಲ್ಲೆ ಹಾಗೂ ಮೈಸೂರು ಜಿಲ್ಲೆಯ ವಿವಿಧ ವಿಷಯಗಳ ಮೌಲ್ಯಮಾಪಕರು ಮತ್ತು ಕಾಲೇಜಿನ ಎಲ್ಲಾ ವಿಭಾಗಗಳ ಪರೀಕ್ಷಾ ಮಂಡಳಿ ಅಧ್ಯಕ್ಷರು ಮತ್ತು ಬೋಧಕರಿಗೆ ಅಭಿನಂದನೆ ಸಲ್ಲಿಸಿದರು.

ಮೌಲ್ಯಮಾಪನ ಸಂಯೋಜಕ ಎಂ.ಮಾದೇಗೌಡ, ಪರೀಕ್ಷಾ ಸಮಿತಿಯ ಸಂಚಾಲಕ ಡಾ.ವಿ.ಶಿವಕೀರ್ತಿ, ಸಹ ಸಂಚಾಲಕ ಡಾ.ಎಸ್.ಶಿವರಾಮು, ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಕೆ.ಪಿ.ರವಿಕಿರಣ್, ಎಸ್.ಪಿ.ಹೇಮಲತಾ ಹಾಜರಿದ್ದರು.

Tags:
error: Content is protected !!