ಶ್ರೀರಂಗಪಟ್ಟಣ: ಸಮಾಜದಲ್ಲಿ ಮಹಿಳೆಯರು ನಾಲ್ಕು ಗೋಡೆಯಲ್ಲಿ ಬದುಕಬೇಕು ಎಂಬ ಪುರುಷರ ಆಲೋಚನೆ ಬದಲಾದರೆ ಮಹಿಳೆಯರು ಇನ್ನೂ ಹೆಚ್ಚು ಸದೃಢರಾಗುತ್ತಾರೆ ಎಂದು ಮಹಿಳಾ ಸರ್ಕಾರಿ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥೆ ಹೇಮಲತಾ.ಎಚ್.ಸಿ ರವರು ಅಭಿಪ್ರಾಯಪಟ್ಟರು.
ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಏರ್ಪಡಿಸಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದೇಶ ಪ್ರಗತಿ ಆಗಬೇಕಾದರೆ ಪುರುಷ ಮತ್ತು ಮಹಿಳೆ ಇಬ್ಬರ ಕಾಣಿಕೆ ಬಹಳ ಮುಖ್ಯ. ಆದರೆ, ಭಾರತವು ಪುರುಷ ಪ್ರಧಾನವಾದ ದೇಶವಾಗಿದ್ದು ಇನ್ನೂ ಕೆಲವು ಕಡೆ ಮಹಿಳೆ ಅಬಲೆಯಾಗಿದ್ದಾಳೆ ಎಂದು ಆತಂಕ ವ್ಯಕ್ತಪಡಿಸಿದರು.
ಒಂದು ದೇಶದ ಆರ್ಥಿಕ ಪ್ರಗತಿಯ ಸಾಧನೆಯಾಗಿ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾಳೆ. ಇಂದಿರಾಗಾಂಧಿ, ಕಲ್ಪನಾ ಚಾವ್ಲಾ, ಕಿರಣ್ ಮುಜುಂದಾರ್, ಸಾಲುಮರದ ತಿಮ್ಮಕ್ಕ ಇನ್ನೂ ಹಲವಾರು ಮಹಿಳೆಯರು ಬಾಹ್ಯಾಕಾಶದಿಂದ ಹಿಡಿದು ಆಟೋ ಚಾಲನೆ ಮಾಡುವವರೆಗೂ ತಮ್ಮ ನೈಪುಣ್ಯತೆ, ಧೈರ್ಯ, ಸವಾಲುಗಳ ಮೂಲಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಕುಟುಂಬದಲ್ಲಿ ತಾಯಿಯಾಗಿ, ಹೆಂಡತಿಯಾಗಿ, ಸಹೋದರರಿಯಾಗಿ, ಮಗಳಾಗಿ, ಎಲ್ಲ ಮುಜಲುಗಳಲ್ಲಿ ಅವಳ ಕಾಣಿಕೆ ದೊಡ್ಡದು ಎಂದು ತಿಳಿಸಿದರು.
ಸಮಾಜದಲ್ಲಿ ಮಹಿಳೆಗೆ ಸಮಾನ ಅವಕಾಶ, ಸಮಾನತೆ, ಗೌರವ ದೊರೆತರೆ ಆ ದೇಶ ಸಮೃದ್ಧಿಯ ನಾಡಾಗುತ್ತದೆ ಇಲ್ಲವಾದರೆ ಅಸಮಾನತೆಯ ಗೂಡಾಗುತ್ತದೆ ಎಂದು ಹೇಳಿದರು.
ನಂತರ ಕಾಲೇಜಿನ ಪ್ರಾಂಶುಪಾಲರಾದ ಡಾ.ಗುರುರಾಜ ಪ್ರಭು.ಕೆ ಮಾತನಾಡಿ, ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾದದ್ದು. ಆದರೆ, ಅವರಿಗೆ ಒಳ್ಳೆಯ ಅವಕಾಶ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಸಂವಿಧಾನದ ಹಕ್ಕು ಮತ್ತು ಅವಕಾಶ ಬಳಸಿಕೊಳ್ಳುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಕುಸುಮದೇವಿ, ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸೈಯದ್ ಕೌಸರ್, ಪ್ರಾಧ್ಯಾಪಕರಾದ ಡಾ. ಜಯಲಕ್ಷ್ಮಿ, ಡಾ.ಪುಷ್ಪಲತಾ, ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಗಿರಿಜಾಂಬರವರು ಹಾಜರಿದ್ದರು.





