ಮಂಡ್ಯ : ಹೆಣ್ಣು ಮಕ್ಕಳನ್ನು ಮಾಡೆಲ್ ರೀತಿ ಸಮಾಜದಲ್ಲಿ ಮಾಡಿಬಿಟ್ಟಿರುವುದರಿಂದ ಅದನ್ನು ಬದಲಾಯಿಸಿ ಅವಳಿಗೂ ಸ್ವಾತಂತ್ರ್ಯ ನೀಡಿ ಆಚರಣೆ ಮತ್ತು ಮೌಢ್ಯತೆಯಿಂದ ಹೊರಗೆ ಬರುವಂತೆ ಮಾಡಬೇಕಿದೆ ಎಂದು ನಟಿ ಅಕ್ಷತಾ ಪಾಂಡವಪುರ ಹೇಳಿದರು.
ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಸಹಯೋಗದಲ್ಲಿ ಶನಿವಾರ ಆರಂಭವಾದ ದುಡಿಯುವ ಮಹಿಳೆಯರ ೯ನೇ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಆಚರಣೆ, ಸಂಪ್ರದಾಯದಲ್ಲಿ ಸಿಲುಕಿಕೊಳ್ಳುವವರೇ ಹೆಣ್ಣು ಮಕ್ಕಳನ್ನು ಕಟ್ಟಿ ಹಾಕಿದ್ದಾರೆ. ಮದುವೆಯಾಗುವ ಹೆಣ್ಣು ಮಕ್ಕಳಿಗೆ ಮುತೈದೆಯಾಗಿ ಬಾಳಮ್ಮಾ ಎನ್ನುವ ಅರ್ಥವೇ ಬೇಗ ಸಾವು ಬರಲಿ ಅಂತಾ? ಆದರೆ ಗಂಡು ಮಕ್ಕಳಿಗೆ ಮಾತ್ರ ಈ ಮಾತು ಹೇಳುವುದಿಲ್ಲ. ಮಹಿಳೆಯರು ‘ವಿಧವೆ ಸ್ಥಾನ ತೆಗೆದುಕೊಳ್ಳಬಾರದೆಂಬುದೇ ಇಲ್ಲಿನ ತಾತ್ಪರ್ಯವಾಗಿದೆ. ಇದರ ಮೂಲ ತಿಳಿದುಕೊಂಡು ಅದನ್ನು ಸರಿಪಡಿಸುವ ಕೆಲಸ ಮಾಡುವ ಮೂಲಕ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೇವಲ ಯಾವುದೋ ಒಮ್ಮೆ ಸಿನಿಮಾಗೋಸ್ಕರ ಅಥವಾ ಇನ್ನಾವುದೋ ಕಾರಣಕ್ಕೆ ಹೆಣ್ಣು ಮಕ್ಕಳು ತುಂಡು ಬಟ್ಟೆ ಹಾಕಿಕೊಂಡು ಬಂದರೆ ಮಾತ್ರ ಅವಳು ಫೋಕೋಸ್ ಆಗಿ ಬಿಡುತ್ತಾಳೆ. ನಯ, ನಾಜೂಕಾಗಿ ಸೀರೆ ಹುಟ್ಟಿಕೊಂಡು ಬಂದರೆ ಅವಳು ಮಾತ್ರ ಫೋಕೋಸ್ ಆಗುವುದೇ ಇಲ್ಲ ಏಕೆ? ಇದನ್ನು ಮಾಧ್ಯಮ ಬಳಗವೂ ಅರ್ಥ ಮಾಡಿಕೊಂಡು ಸಮಾಜಕ್ಕೆ ಏನು ಬೇಕೆಂಬುದನ್ನು ಚಿತ್ರಿಸಿ ನೀಡುವ ಜವಾಬ್ದಾರಿ ಇದೆ. ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸದೃಢವಾಗಿ ಮಾಡುವ ಹೊಣೆಗಾರಿಕೆ ಹೊರುವ ಮನಸುಗಳು ಸಮಾಜದಲ್ಲಿ ಬೇಕು ಎಂದು ತಿಳಿಸಿದರು.
ಹೆಣ್ಣಿನ ಮೇಲೆ ದೌರ್ಜನ್ಯ ನಡೆದರೆ ಅದನ್ನು ಆ ಹೆಣ್ಣು ಪ್ರಶ್ನಿಸಲು ಹೋಗದೇ ಇದ್ದರೆ ಮಾತ್ರ ಸಮಾಜದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾಳೆ, ಮಾತಾಡಿದರೆ ಇಲ್ಲಿ ಶಿಕ್ಷೆ ಆಗಿ ಬಿಡುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಆಲೆಮನೆಗಳು ಹೆಚ್ಚಿವೆ, ಆದರೆ ಅಂತಹ ಯಾವುದೋ ಒಂದು ಆಲೆಮನೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತದೆ, ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಎಲ್ಲಿಯಾದರೂ ಗಂಡು ಭ್ರೂಣ ಹತ್ಯೆ ನಡೆದಿದಿಯಾ ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕು ಎಂದು ವಿಷಾದಿಸಿದರು.
ಸಾಹಿತಿ ಎಂ.ಎಸ್.ಆಶಾದೇವಿ ಮಾತನಾಡಿ, ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಕ್ಕಳನ್ನು ಏಕೆ ಸಂತ್ರಸ್ಥೆ ಎನ್ನಬೇಕು, ಅತ್ಯಾಚಾರ ಮಾಡಿದವರನ್ನೇ ಸಾಮಾಜಿಕವಾಗಿ ಬಹಿಷ್ಕಾರ ಮಾಡಬೇಕು. ಸಂತ್ರೆಸ್ಥೆ ಎನ್ನುವ ಬದಲು ಅವಳ ಚೈತನ್ಯದ ಮೇಲೆ ಅತ್ಯಾಚಾರ ನಡೆದಿಲ್ಲ ಎನ್ನುವುದನ್ನು ನಾವು ಮತ್ತು ನೀವು ಅರ್ಥ ಮಾಡಿಕೊಳ್ಳಬೇಕು. ಸಮಾಜದಲ್ಲಿ ಅತ್ಯಾಚಾರ ಹಾಗೂ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ, ದಬ್ಬಾಳಿಕೆ ಕೊನೆಗಾಣಬೇಕು. ಅಂತಹ ನಿರ್ಧಾರಗಳನ್ನು ಸಮಾಜದಲ್ಲಿ ತೆಗೆದುಕೊಳ್ಳುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ಅಖಿಲ ಭಾರತ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಸಂಚಾಲಕರಾದ ಎ.ಆರ್.ಸಿಂಧು, ಸಿ.ಕುಮಾರಿ ಮಾತನಾಡಿದರು. ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ ಎಸ್.ವರಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್ ಅವರು ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಲೋಕೋ ಪೈಲಟ್ ಅಭಿರಾಮಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಸಂಚಾಲಕಿ ಎಚ್.ಎಸ್.ಸುನಂದಾ, ಅಂಗನವಾಡಿ ನೌಕರರ ಸಂಘದ ಪ್ರಮೀಳಾ ಕುಮಾರಿ, ಮುಖಂಡರಾದ ಮಂಗಳಾ ಕುಮಾರಿ, ಕುಸುಮಾ, ಜಿ.ರಾಮಕೃಷ್ಣ, ಬಾಲ್ಕೇಜಿರಾವ್ ಭಾಗವಹಿಸಿದ್ದರು.





