ಮೇಲುಕೋಟೆ : ಚಲುವನಾರಾಯಣಸ್ವಾಮಿ ದಾಸೋಹ ಭವನದ ನಿರ್ವಹಣೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಾಗ್ದಾನ ಮಾಡಿದರು.
ಮೇಲುಕೋಟೆಯ ದಾಸೋಹ ಭವನಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅಲ್ಲೇ ತಯಾರಿಸಿದ ಪ್ರಸಾದವನ್ನು ಸ್ವೀಕರಿಸಿ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು.
ಸ್ವಚ್ಛತೆ ಹಾಗೂ ಅನ್ನದಾನ ನಿರ್ವಹಣೆ, ಪ್ರಸಾದದ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ನೀಡಿದ ವಿಶೇಷ ಅನುದಾನದಲ್ಲಿ ನನ್ನ ಅವಧಿಯಲ್ಲೇ ನಿರ್ಮಾಣಗೊಂಡು ಮುಖ್ಯಮಂತ್ರಿಗಳಿಂದ ವೈರಮುಡಿ ಉತ್ಸವದಂದೇ ಉದ್ಘಾಟಿಸಲಾಗಿತ್ತು. ಕಾರಣಾಂತರದಿಂದ ನಿತ್ಯಅನ್ನದಾನ ಆರಂಭಿಸಲಾಗಿರಲಿಲ್ಲ. ಇದೀಗ ಅನ್ನದಾನ ಭವನ ವಾರಕ್ಕೆರಡು ದಿನ ಸಾರ್ವಜನಿಕರ ಉಪಯೋಗಕ್ಕೆ ದೊರೆಯುತ್ತಿರುವುದು ಸ್ವಾಗತಾರ್ಹ ಎಂದರು. ಮೇಲುಕೋಟೆಯಲ್ಲಿ ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸುವ ಮತ್ತು ಅನ್ನದಾನಭವನ ನಿರ್ವಹಣೆಯಲ್ಲಿ ಯಾರೂ ರಾಜಕೀಯ ಮಾಡಬಾರದು. ನಾನೂ ಕೂಡ ನಿರ್ವಹಣೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು.
ಇದೇ ವೇಳೆ ಮುಳುಬಾಗಿಲ ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ನಾವು ಎಷ್ಟೇ ಶ್ರೀಮಂತರಾದರೂ ದೇವಸ್ಥಾನದ ಪ್ರಸಾದ ಮತ್ತು ದರ್ಶನ ಅತ್ಯಂತ ಪವಿತ್ರವಾದುದು. ಆದ್ದರಿಂದ ಕ್ಷೇತ್ರದ ಅಭಿವೃದ್ಧಿ ಮತ್ತು ದಾಸೋಹ ಭವನದ ನಿರ್ವಹಣೆಗೆ ಕೈಲಾದ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದರು.
ಯುವ ಮುಖಂಡರಾದ ಈಶಮುರಳಿ, ಪುಳಿಯೋಗರೆ ರವಿ, ದೇವಾಲಯದ ಸಿಬ್ಬಂದಿ ಹಾಜರಿದ್ದರು.





