ಕೆ.ಆರ್.ಪೇಟೆ: ಎಮ್ಮೆಗೆ ಮೈ ತೊಳೆಯಲು ಹೋಗಿದ್ದ ಹೆಂಡತಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ರಕ್ಷಣೆ ಮಾಡಲು ಹೋದ ಗಂಡನೂ ಸಹ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವ ಹೃದಯ ವಿದ್ರಾವಿಕ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಅರೆಬೊಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅರೆಬೊಪ್ಪನಹಳ್ಳಿ ಗ್ರಾಮದ ಕಾಳೇಗೌಡರ ಪತ್ನಿ ವಸಂತಮ್ಮ(65) ಮತ್ತು ಕಾಳೇಗೌಡ(70) ಮೃತ ದುರ್ದೈವಿ ದಂಪತಿಗಳು ಎಂದು ತಿಳಿದು ಬಂದಿದೆ.
ಘಟನೆ ವಿವರ
ಬುಧವಾರ ಸಂಜೆ ಸುಮಾರು 6ಗಂಟೆಯ ಸಮಯದಲ್ಲಿ ತಮ್ಮ ಜಮೀನಿನಲ್ಲಿ ಇರುವ ತೆರೆದ ಬಾವಿಯಲ್ಲಿ ಎಮ್ಮೆಗೆ ಮೈ ತೊಳೆಯಲೆಂದು ವಸಂತಮ್ಮ ಹೋಗಿದ್ದ ಸಂದರ್ಭದಲ್ಲಿ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗುತ್ತಿದ್ದರು. ಇದನ್ನು ಕಣ್ಣಾರೆ ನೋಡಿದ ಆಕೆಯ ಗಂಡ ಕಾಳೇಗೌಡ ಸಹ ನೀರಿಗೆ ದುಮುಕಿ ಹೆಂಡತಿ ಮತ್ತು ಎಮ್ಮೆಯನ್ನು ರಕ್ಷಣೆ ಮಾಡಲು ಪ್ರಯತ್ನಿಸಿದ್ದಾಗ ಎಮ್ಮೆ ಈಜಿ ದಡ ಸೇರಿದರೆ ಗಂಡ ಕಾಳೇಗೌಡ ಮತ್ತು ಹೆಂಡತಿ ವಸಂತಮ್ಮ ಇಬ್ಬರೂ ಸಹ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ.
ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ಇಡೀ ಅರೆಬೊಪ್ಪನಹಳ್ಳಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ಮೃತರ ಅಂತ್ಯಕ್ರಿಯೆಯು ಅರೆಬೊಪ್ಪನಹಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಅರೆಬೊಪ್ಪನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರ ಹಾಗೂ ಬಂಧುಗಳ ಆಕ್ರಂಧನದ ನಡುವೆ ನಡೆಯಿತು. ಮೃತರ ನಿಧನಕ್ಕೆ ತಾಲ್ಲೂಕಿನ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.





