ಮಳವಳ್ಳಿ: ಜೆಡಿಎಸ್ ಅಸ್ತಿತ್ವಕ್ಕೆ ಜಿಲ್ಲೆ ಹಾಗೂ ಜಿಲ್ಲೆಯ ಜನರನ್ನೇಕೆ ಬಲಿ ಕೊಡಬೇಕು ಎಂದು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಎನ್ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.
ಮಳವಳ್ಳಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ನಾಯಕ ಮಾಜಿ ಸಿಎಂ ಕುಮಾರಸ್ವಾಮಿ ಅವರು ಜಿಲ್ಲೆಯ ಜನರಿಗಾಗಿ ಲೋಕಸಭಾ ಚುನಾವಣೆಗೆ ಬರುತ್ತಿಲ್ಲ. ಅವರು ತಮ್ಮ ಪಕ್ಷದ ಅಸ್ತಿತ್ವಕ್ಕೆ ಜಿಲ್ಲೆಗೆ ಬರುತ್ತಿದ್ದಾರೆ. ಅವರ ಪಕ್ಷದ ಅಸ್ತಿತ್ವಕ್ಕೆ ಜಿಲ್ಲೆ ಹಾಗೂ ಜಿಲ್ಲೆಯ ಜನರನ್ನು ಏಕೆ ಬಲಿ ಕೊಡಬೇಕು ಎಂದಿದ್ದಾರೆ.
ಜಿಲ್ಲೆಯ ಜನರ ದುಡುಕಿನ ನಿರ್ಧಾರ ಜಿಲ್ಲೆಯನ್ನು ನೂರು ವರ್ಷದಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ರಾಜಕೀಯ ತೀರ್ಮಾನ ನಿಮ್ಮ ಕೈಯಲ್ಲಿದೆ. ನಾವು ಜಿಲ್ಲೆಯ ಉಳಿವಿಗಾಗಿ ಹೋರಾಟ ಮಾಡುತ್ತಿದ್ದೇವೆ, ನಮ್ಮೊಂದಿಗೆ ಕೈಜೋಡಿಸಿ
ಎಂದು ಮನವಿ ಮಾಡಿದರು.
ಲೋಕಸಭಾ ಚುನಾವಣೆ ಸೋಲು ಕುಮಾರಸ್ವಾಮಿ ಅವರಿಗೆ ಹೊಸದಲ್ಲ. ಅವರ ಸೋಲಿನಿಂದ ಏನು ಹಾಗಲ್ಲ. ಜನರು ಕರೆದಾಗ ಬರುವುದು ಸ್ಟಾರ್ ಚಂದ್ರು ಅವರೇ ಹೊರತು ಕುಮಾರಸ್ವಾಮಿ ಅಲ್ಲ, ಕುಮಾರಸ್ವಾಮಿ ಅವರನ್ನು ನೀವು ನಿಮ್ಮ ಊರಿನ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಕರೆಯುವುದಕ್ಕೇ ಆಗುತ್ತಾ? ಯೋಚನೆ ಮಾಡಿ, ನಮಗೆ ಜಿಲ್ಲೆ ಹಾಗೂ ಜಿಲ್ಲೆ ಅಭಿವೃದ್ಧಿ ಮಾತ್ರ ಮುಖ್ಯವಾಗಿದೆ ಎಂದರು