ನಾಗಮಂಗಲ: ಮುಂದಿನ ಯುವ ಪೀಳಿಗೆಗೆ ಸತ್ವವಾದ ಮಣ್ಣು, ಯೋಗ್ಯ ನೀರು ಒದಗಿಸುವ ಜವಬ್ದಾರಿ ನಮ್ಮಗಳ ಮೇಲಿದೆ ಎಂದು ಮಣ್ಣು ವಿಜ್ಞಾನಿ ಡಾ.ಹತಿಫ ಹೇಳಿದರು.
ಕೃಷಿ ಇಲಾಖೆಯ ಸಹಯೋಗದಲ್ಲಿ ದೇವಲಾಪುರ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಪ್ರಧಾನಮಂತ್ರಿ ಕೃಷಿ ಸಂಚಾಯಿ ಯೋಜನೆ ಅಡಿ ಜಲಾನಯನ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರು ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವುದು ಅತಿ ಅವಶ್ಯಕ. ಮಣ್ಣಿನ ಸವಕಳಿ ತಪ್ಪಿಸಲು ಬದುಗಳನ್ನು ನಿರ್ಮಿಸಿಕೊಳ್ಳಬೇಕು. ಡಬ್ಲ್ಯೂಡಿಸಿ ಟು ಯೋಜನೆ ಹಾಗೂ ಕೃಷಿ ಇಲಾಖೆಯ ಯೋಜನೆ ಅಡಿ ರೈತರು ಕೃಷಿ ಹೊಂಡ ನಿರ್ಮಿಸಿಕೊಳ್ಳಬಹುದು ಎಂದು ತಿಳಿಸಿದರು.
ಈ ಅಭಿಯಾನದಡಿ ಜಲಾನಯನ ಸಂರಕ್ಷಣೆ ಮಣ್ಣಿನ ಆರೋಗ್ಯ ವರ್ಧನೆ ಮತ್ತು ಮಳೆ ನೀರು ಸಂಗ್ರಹ ಸಂಬಂಧ ಆತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುತ್ತದೆ.
ಸುಸ್ಥಿರ ನೀರು ನಿರ್ವಹಣೆ ಮಹತ್ವದ ಹೆಜ್ಜೆಯಾಗಿ ಪ್ರಧಾನ ಮಂತ್ರಿ ಕೃಷಿ ಸಂಚಾಯಿ ಯೋಜನೆ ಜಲಾನಯನ ಅಭಿವೃದ್ಧಿ ಘಟಕದಲ್ಲಿ ರಾಷ್ಟ್ರ ಮಟ್ಟದಿಂದ ಜಾಗೃತಿ ಅಭಿಯಾನ ಜಲಾನಯನ ಯಾತ್ರೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ.
ಸಭೆಯಲ್ಲಿ ಭೂಮಿ ಮತ್ತು ನೀರನ್ನು ಸಂರಕ್ಷಿಸುವ ಪ್ರತಿಜ್ಞಾ ಬೋಧನೆಯನ್ನು ಮಾಡಲಾಯಿತು. ಈ ಯಾತ್ರೆಯ ಅಂಗವಾಗಿ ರೈತ ಮಹಿಳೆಯರಿಗೂ ವಿವಿಧ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿದ್ದು ವಿಜೇತರಿಗೆ ಬಹುಮಾನ ವಿತರಣೆ ಮಾಡುವುದರ ಜೊತೆಗೆ ಮಾರ್ಗದರ್ಶಕರನ್ನು ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಮಂಡ್ಯ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಾದ ಅಶೋಕ್, ಪಾಂಡವಪುರ ಉಪ ಕೃಷಿ ನಿರ್ದೇಶಕರಾದ ಭಾನುಪ್ರಕಾಶ್, ದೇವಲಾಪುರ ರೈತ ಉತ್ಪಾದಕರ ಸಂಘದ ಅಧ್ಯಕ್ಷ ಎನ್.ಜೆ.ರಾಜೇಶ್, ತಟ್ಟಹಳ್ಳಿ ನರಸಿಂಹಮೂರ್ತಿ, ಗ್ರಾ.ಪಂ. ಅಧ್ಯಕ್ಷರಾದ ಬೋರಯ್ಯ, ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕ ನಾಗೇಗೌಡ ಮತ್ತು ಕೃಷಿ ಇಲಾಖೆಯ ನೌಕರವರ್ಗ ಉಪಸ್ಥಿತರಿದ್ದರು. ನಾಗಮಂಗಲ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಹರೀಶ್ ಸ್ವಾಗತಿಸಿದರು.





