Mysore
26
haze

Social Media

ಸೋಮವಾರ, 09 ಫೆಬ್ರವರಿ 2026
Light
Dark

ಕೇಂದ್ರ ಬಜೆಟ್‌ ದೇಶದ ಅಭಿವೃದ್ಧಿಗೆ ಪೂರಕ : ಡಾ. ಸಿ.ಎನ್.ಅಶ್ವತ್ಥ ನಾರಾಯಣ

ಮಂಡ್ಯ : ಆಡಳಿತದಲ್ಲಿ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿ ಸ್ವಾವಲಂಬಿ ಮತ್ತು ಆತ್ಮನಿರ್ಭರ ಭಾರತ ಗುರಿಯಾಗಿಸಿಕೊಂಡು ಉದ್ಯೋಗ, ಕೃಷಿ ಉತ್ಪಾದನೆ, ನಾಗರಿಕರ ಕೊಳ್ಳುವ ಶಕ್ತಿ ಹೆಚ್ಚಿಸಲು ಕೇಂದ್ರ ಬಜೆಟ್ ಮಂಡಿಸಲಾಗಿದ್ದು, ಇದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.

ಬಜೆಟ್‌ನಲ್ಲಿ ಮೂರು ಕರ್ತವ್ಯ ಭಾಗವಾಗಿ ವಿಂಗಡಣೆ ಮಾಡಲಾಗಿದ್ದು, ಆರ್ಥಿಕ ಕ್ಷೇತ್ರಕ್ಕೆ ವೇಗ ಹೆಚ್ಚಿಸುವುದು, ನಾಗರಿಕರ ಆಶಯಗಳನ್ನು ಈಡೇರಿಸುವುದು ಮತ್ತು ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚಿನ ಸುಧಾರಣೆಗೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

೩೫೦ಕ್ಕೂ ಹೆಚ್ಚಿನ ಸುಧಾರಣೆಗಳನ್ನು ತರಲಾಗಿದೆ. ಸ್ಥಿರ ಅಭಿವೃದ್ಧಿ, ಅಸ್ಥಿರ ಜಾಗತಿಕ ಪರಿಸ್ಥಿತಿಯಲ್ಲೂ ಮೋದಿ ಸರ್ಕಾರ ಶೇ.೭ರಷ್ಟು ಆರ್ಥಿಕ ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ಬಾರಿ ಇದ್ದ ಶೇ.೪.೫ ಜಿಡಿಪಿಯನ್ನು ಪ್ರಸಕ್ತ ಸಾಲಿನಲ್ಲಿ ಶೇ.೪.೩ಕ್ಕೆ ಇಳಿಸಲಾಗಿದೆ. ಜಿಡಿಪಿ ಅನುಪಾತವನ್ನು ಈ ಬಾರಿ ಶೇ. ೫೫.೬ಕ್ಕೆ ಇಳಿಸಲಾಗಿದ್ದು, ಮುಂದಿನ ೨೦೩೧ರ ವೇಳೆಗೆ ಶೇ. ೫೦ಕ್ಕೆ ತರುವ ಗುರಿಯನ್ನು ಹೊಂದಲಾಗಿದೆ. ರಾಜ್ಯಗಳಿಗೆ ೧೬ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಶೇ.೪೧ ತೆರಿಗೆ ಪಾಲು ಮತ್ತು ೧.೪ ಲಕ್ಷ ಕೋಟಿ ರೂ. ಅನುದಾನವನ್ನು ನೀಡಲಾಗಿದೆ ಎಂದು ಹೇಳಿದರು.

ಗುಣಮಟ್ಟದ ಶಿಕ್ಷಣದ ಮೂಲಕ ಯುವಶಕ್ತಿ ಸಬಲೀಕರಣ, ಎಂಎಸ್‌ಎಂಇ ಸಾಮರ್ಥ್ಯ ಹೆಚ್ಚಿಸುವುದು, ಬೃಹತ್ ಪ್ರಮಾಣದ ಉತ್ಪಾದನೆ ವಿಸ್ತರಣೆ ಮಾಡಲು ಯೋಜನೆ, ಮೂಲ ಸೌಕರ್ಯ ಆಧಾರಿತ ಬೆಳವಣಿಗೆಯಲ್ಲಿ ಸಾರ್ವಜನಿಕ ಬಂಡವಾಳವನ್ನು ೧೧.೨ ಲಕ್ಷ ಕೋಟಿ ರೂ.ಗಳಿಂದ ೧೨.೨ ಲಕ್ಷ ಕೋಟಿ ರೂ.ಗಳಿಗೆ ಏರಿಸುವುದು, ೫ ವರ್ಷಗಳಲ್ಲಿ ೨೦ ಹೊಸ ರಾಷ್ಟ್ರೀಯ ಜಲ ಮಾರ್ಗಗಳ ಕಾರ್ಯಗತಗೊಳಿಸುವುದು, ಪ್ರವಾಸೋದ್ಯಮ ಅಭಿವೃದ್ಧಿಗೆ ಸೀಪ್ಲೇನ್ ಉತ್ಪಾದನೆ ಮತ್ತು ಕಾರ್ಯಾಚರಣೆಗೆ ವಿಶೇಷ ರಿಯಾಯಿತಿ. ದೊಡ್ಡ ನಗರಗಳಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯಸರ್ಕಾರಗಳಿಗೆ ಕೇಂದ್ರ ಮಾರ್ಗದರ್ಶನ ನೀಡಲಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮುಖಂಡರಾದ ಡಾ.ಸಿದ್ದರಾಮಯ್ಯ, ಎಸ್. ಸಚ್ಚಿದಾನಂದ, ಅಶೋಕ್ ಜಯರಾಂ, ವಸಂತ್ ಕುಮಾರ್, ಎಚ್.ಆರ್. ಅಶೋಕ್‌ಕುಮಾರ್, ಎಚ್.ಪಿ. ಸ್ವಾಮಿ, ಶ್ರೀಧರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಎಚ್‌ಡಿಕೆ ಕೈಗಾರಿಕೆ ಸ್ಥಾಪಿಸುತ್ತಾರೆ
ಕೈಗಾರಿಕೆ ತರುವ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯ ಸರ್ಕಾರ ಸ್ಪಂದಿಸಿದಾಗ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶಕ್ತಿ ಇದ್ದು, ಮಂಡ್ಯದಲ್ಲಿ ಕೈಗಾರಿಕೆ ಮಾಡೇ ಮಾಡ್ತಾರೆ. ರಾಜ್ಯದಲ್ಲಿ ಕೈಗಾರಿಕಾ ವಲಯ ಮಾಡಲು ಒತ್ತಾಯವಿದೆ. ಕೆಲವರು ಬೆಂಗಳೂರು ಭಾಗದಲ್ಲಿ ಕೇಳುತ್ತಿದ್ದಾರೆ. ಆದರೂ ಮಂಡ್ಯದಲ್ಲಿ ಕೈಗಾರಿಕಾ ಕ್ಷೇತ್ರ ವಿಸ್ತರಣೆ ಮಾಡಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಕೈಗಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ರಾಜ್ಯ ಸರ್ಕಾರ ಸ್ಪಂದಿಸುವ ಕೆಲಸ ಮಾಡಿದರೆ ಅಭಿವೃದ್ಧಿಯೂ ಆಗಲಿದೆ. ನಾವು ರಾಜಕಾರಣ ಮಾಡಲ್ಲ. ಆದರೆ ಅಭಿವೃದ್ಧಿ ಮಾಡಬೇಕು ಎಂದರು.

ರಾಷ್ಟ್ರಮಟ್ಟದಲ್ಲಿಯೇ ಮೈತ್ರಿ ನಿಶ್ಚಯ
ರಾಷ್ಟ್ರಮಟ್ಟದಲ್ಲಿಯೇ ಮೈತ್ರಿ ನಿಶ್ಚಯವಾಗಿದೆ. ನಮ್ಮದು ಕಾಂಗ್ರೆಸ್ ಸೋಲಿಸುವುದೇ ಗುರಿಯಾಗಿದೆ ಎಂದು ಜಿಲ್ಲೆಯಲ್ಲಿ ಮೈತ್ರಿ ಗೊಂದಲ ವಿಚಾರಕ್ಕೆ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ವಿರುದ್ಧವಾಗಿ ಜಾ.ದಳ-ಬಿಜೆಪಿ ಮೈತ್ರಿ ಸ್ಥಾಪನೆಯಾಗಿದೆ. ಕಾಂಗ್ರೆಸ್ ಆಡಳಿತದಿಂದ ದೇಶಕ್ಕೆ ಒಳ್ಳೆಯದಾಗುತ್ತಿಲ್ಲ ಎನ್ನುವ ಗುರಿಯನ್ನಾಗಿಸಿಕೊಂಡು ಮೈತ್ರಿ ಕಟ್ಟಲಾಗಿದೆ. ಸಮಾಜದ ಪರವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಸಣ್ಣಪುಟ್ಟ ಸಮಸ್ಯೆ ಇದ್ದು ಸರಿಪಡಿಸುವ ಕೆಲಸ ಆಗಲಿದೆ ಎಂದರು.

 

Tags:
error: Content is protected !!