ಮಂಡ್ಯ : ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಗುರುತಿಸಿರುವ ಹೆಗ್ಗಳಿಕೆ ಮಂಡ್ಯ ಜಿಲ್ಲೆಗೆ ಬಂದಿದ್ದು, ಪ್ರವಾಸಿ ತಾಣಗಳನ್ನು ಉತ್ತೇಜಿಸಲು ಪ್ರವಾಸಿ ಗೈಡ್, ಮ್ಯಾಪ್ ಹಾಗೂ ವೈಬ್ ಸೈಟ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಕಾವೇರಿ ನದಿ ತೀರದಲ್ಲಿ ಒತ್ತುವರಿಯಾಗಿರುವ ಪ್ರದೇಶಗಳನ್ನು ತೆರವುಗೊಳಿಸುವ ಸಂಬಂಧ ಚರ್ಚಿಸಲು ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಸೋದ್ಯಮ ನೀತಿ ೨೦೨೪-೨೯ ರಡಿ ಮಂಡ್ಯ ಜಿಲ್ಲೆಯಲ್ಲಿ ೧೦೬ ಪ್ರವಾಸಿ ತಾಣಗಳನ್ನು ಸರ್ಕಾರದಿಂದ ಅಧಿಕೃತವಾಗಿ ಗುರುತಿಸಲಾಗಿದೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ರೀತಿಯ ವೆಬ್‌ಸೈಟ್ ಇಲ್ಲದ ಕಾರಣ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲಾ ಪ್ರವಾಸೋದ್ಯಮದ ಕುರಿತು ವೆಬ್‌ಸೈಟ್ ಅನ್ನು ಸಾರ್ವಜನಿಕರು ಹಾಗೂ ಪ್ರವಾಸಿಗರ ಉಪಯೋಗಕ್ಕಾಗಿ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಅಧಿಕೃತ ಚಾಲನೆ ನೀಡಲಾಗುವುದು ಎಂದರು.
ಮೇಲುಕೋಟೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿರುವ ಯಾತ್ರಿನಿವಾಸ ಕಟ್ಟಡವನ್ನು ನಿರ್ವಹಣೆಗೆ ವಹಿಸುವ ಸಂಬಂಧ ಪ್ರವಾಸೋದ್ಯಮ ಇಲಾಖೆಯಿಂದ ಕರೆಯಲಾಗಿದ್ದ ಇ-ಟೆಂಡರ್‌ನಲ್ಲಿ ಬಿಡ್ಡುದಾರರು ಭಾಗವಹಿಸದ ಹಿನ್ನೆಲೆಯಲ್ಲಿ ಸದರಿ ಕಟ್ಟಡವನ್ನು ಮೇಲುಕೋಟೆಯ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಽಕಾರಿಗಳು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.
ಶ್ರೀರಂಗಪಟ್ಟಣದ ಕೋಟೆ ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅನುಷ್ಠಾನಗೊಳಿಸಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ನಿರ್ವಹಣೆಗಾಗಿ ಸೂಕ್ತ ಸಂಸ್ಥೆಯನ್ನು ಆಯ್ಕೆ ಮಾಡಲು ಆಹ್ವಾನಿಸಲಾಗಿದ್ದ ಇ-ಟೆಂಡರ್‌ನಲ್ಲಿ ಯಾವುದೇ ಬಿಡ್ಡುದಾರರು ಭಾಗವಹಿಸದ ಹಿನ್ನೆಲೆಯಲ್ಲಿ ಸದರಿ ಸೌಲಭ್ಯವನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ನಿರ್ವಹಿಸಬೇಕಿದ್ದು,ಸರ್ಕಾರದಿಂದ ಅನುದಾನ ಪಡೆಯಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.
ಇದನ್ನು ಓದಿ: ಕೆ.ಆರ್.ಪೇಟೆ | ರೈತನ ಮೇಲೆ ಚಿರತೆ ದಾಳಿ ; ಪ್ರಾಣಾಪಾಯದಿಂದ ಪಾರು
ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರು ಪ್ರವಾಸಿ ತಾಣದಲ್ಲಿ ನಿರ್ಮಿಸಿರುವ ಇಂಟರ್‌ಪ್ರಿಟೇಷನ್ ಸೆಂಟರ್ ಸೌಲಭ್ಯದ ನಿರ್ವಹಣೆಗಾಗಿ ಸೂಕ್ತ ಸಂಸ್ಥೆಯನ್ನು ಆಯ್ಕೆ ಮಾಡಲು ಆಹ್ವಾನಿಸಲಾಗಿದ್ದ ಇ-ಟೆಂಡರ್‌ನಲ್ಲಿ ಯಾವುದೇ ಬಿಡ್ಡುದಾರರು ಭಾಗವಹಿಸದ ಹಿನ್ನೆಲೆಯಲ್ಲಿ ಸದರಿ ಸೌಲಭ್ಯವನ್ನು ‘ಡಬ್ಲ್ಯುಡಬ್ಲ್ಯುಎಫ್ ಇಂಡಿಯಾ’ ಸಂಸ್ಥೆಯಿಂದ ನಿರ್ವಹಿಸಲು ಸರ್ಕಾರದಿಂದ ಸೂಕ್ತ ಸ್ಪಷ್ಟೀಕರಣ ಪಡೆಯಬೇಕು ಎಂದು ಹೇಳಿದರು.
ನಾಗಮಂಗಲ ತಾಲ್ಲೂಕಿನ ಮುಳುಕಟ್ಟಮ್ಮ ದೇವಾಲಯದ ಬಳಿ ನಿರ್ಮಿಸಿರುವ ಯಾತ್ರಿನಿವಾಸ ಕಟ್ಟಡವನ್ನು ನಿರ್ವಹಣೆಗಾಗಿ ವಹಿಸುವ ಸಂಬಂಧ ಪ್ರವಾಸೋದ್ಯಮ ಇಲಾಖೆಯಿಂದ ಕರೆಯಲಾಗಿದ್ದ ಇ-ಟೆಂಡರ್‌ನಲ್ಲಿ ಇಬ್ಬರು ಬಿಡ್ಡುದಾರರು ಭಾಗವಹಿಸಿದ್ದು, ಅವರು ಅಗತ್ಯ ದಾಖಲೆಗಳನ್ನು ಸಲ್ಲಿಸದೇ ಇರುವ ಹಿನ್ನೆಲೆಯಲ್ಲಿ, ತಾಂತ್ರಿಕವಾಗಿ ಬಿಡ್‌ಗಳು ಅನರ್ಹಗೊಂಡಿವೆ. ಸದರಿ ಟೆಂಡರ್ ಅನ್ನು ರದ್ದುಪಡಿಸಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ನಿರ್ವಹಿಸಲು ಸೂಕ್ತ ಸಂಸ್ಥೆಯನ್ನು ಆಯ್ಕೆ ಮಾಡಲು ಹೊಸದಾಗಿ ಮರು ಟೆಂಡರ್ ಆಹ್ವಾನಿಸಬೇಕು ಎಂದು ಸಲಹೆ ನೀಡಿದರು.
ಮಂಡ್ಯ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಒಟ್ಟು ೩೬೭೨.೪೧ ಲಕ್ಷ ರೂ. ವೆಚ್ಚದಲ್ಲಿ ೪೧ ಮುಂದುವರಿದ ಪ್ರವಾಸಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸದರಿ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಪೊಲೀಸ್ ಅಧಿಕ್ಷಕ ಗಂಗಾಧರಸ್ವಾಮಿ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ-೧ ಶಿವಲಿಂಗಯ್ಯ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ನಿರ್ದೇಶಕಿ ಗೀತಾ, ಇತರರು ಭಾಗವಹಿಸಿದ್ದರು.





