ಮಂಡ್ಯ : ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮೊಫೆಡ್‌ನಲ್ಲಿ ಹೋಗುತ್ತಿದ್ದವರನ್ನು ಅಡ್ಡ ಹಾಕಿ ಮಹಿಳೆಯ ಕತ್ತಿನಲ್ಲಿದ್ದ ೪೦ ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ನಾಗಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿ ಕಾರು ಹಾಗೂ ೧೫.೭೦ ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಶ್ರೀನಗರದ ನಿವಾಸಿ ಎಸ್.ಕುಮಾರ ಅಲಿಯಾಸ್ ಕಸ್ಟಡಿ (೨೬), ರಾಮನಗರ ಜಿಲ್ಲೆಯ ಎಸ್.ಎಂ. ಹಳ್ಳಿಯ ನಾಗರಾಜ ಅಲಿಯಾಸ್ ಸತ್ತಾರ್ (೨೭), ರಾಮನಗರ ಟೌನ್‌ನ ನರಸಿಂಹ (೨೫) ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ.
ನಾಗಮಂಗಲ ತಾಲೂಕು ಕೋಣನೂರು ಗ್ರಾಮದ ಸುಶೀಲಮ್ಮ ಅವರು ಆ. ೮ರಂದು ಮಧ್ಯಾಹ್ನ ೧೨.೧೫ರಲ್ಲಿ ತಮ್ಮ ಮೈದುನ ದೇವೇಗೌಡರೊಂದಿಗೆ ಚೀಣ್ಯ-ಗಂಗವಾಡಿ ರಸ್ತೆಯಲ್ಲಿ ಹೋಗಿದ್ದಾಗ ಆರೋಪಿಗಳು ಕಾರಿನಲ್ಲಿ ಬಂದು ಮೊಪೆಡ್‌ನ್ನು ಅಡ್ಡ ಹಾಕಿ ಸುಶೀಲಮ್ಮಳ ಕತ್ತಿನಲ್ಲಿದ್ದ ೪೦ ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಡಿವೈಎಸ್ಪಿ ಚಲುವರಾಜು, ಸಿಪಿಐ ನಿರಂಜನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮಾಗಡಿ ಜಲಸೂರು ರಸ್ತೆಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ ಸರಗಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಲ್ಲದೆ, ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಮೂರು ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿದ್ದು, ಕೃತ್ಯಕ್ಕೆ ಬಳಸಿದ್ದ ಕಾರು, ಚಿನ್ನಾಭರಣ ಸೇರಿದಂತೆ ೧೫.೭೦ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಾಗಮಂಗಲ ಗ್ರಾಮಾಂತರ ಠಾಣೆಯ ಪೊಲೀಸರ ಕಾರ‍್ಯವನ್ನು ಜಿಲ್ಲಾ ಪೊಲೀಸ್ ಅಧಿಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಶ್ಲಾಘಿಸಿದ್ದಾರೆ.





