ಮಂಡ್ಯ: ಸಂವಿಧಾನ ಶಿಲ್ಪಿ ಡಾ: ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಅನುಸರಿಸಿ ಉಳಿಸಿಕೊಳ್ಳುವ ಜವಾಬ್ದಾರಿ ಇಂದಿನ ಯುವಕರ ಮೇಲಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಹೇಳಿದರು.
ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಂವಿಧಾನ ಓದು ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಸಂವಿಧಾನವು ಜಗತ್ತಿನ ಅತಿ ದೊಡ್ಡ ಸಂವಿಧಾನವಾಗಿದೆ. ಸಮಸಮಾಜ ನಿರ್ಮಾಣ ಕುರಿತು ರಚನೆಯಾದ ಸಂವಿಧಾನ ಅನೇಕರಿಗೆ ಅದರ ಮೂಲ ತತ್ವಗಳ ಬಗ್ಗೆ ತಿಳಿದೇ ಇಲ್ಲ ಎಂಬುದು ವಿಷಾದನೀಯ ಎಂದರು.
ಸಂವಿಧಾನದ ಬಗ್ಗೆ ಎಲ್ಲರೂ ತಿಳಿಯಬೇಕು ಎಂಬ ಉದ್ದೇಶದಿಂದ 2018 ರಲ್ಲಿ ‘ಸಂವಿಧಾನ ಓದು’ ಎಂಬ ಪುಸ್ತಕ ರಚಿಸಿದ್ದೆ. ಕಳೆದ 6 ವರ್ಷದಲ್ಲಿ ಸಂವಿಧಾನ ಕುರಿತು 2000 ಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದೇನೆ. ಇಷ್ಟಾದರೂ ರಾಜ್ಯದ ಒಂದಿಷ್ಟು ಜನರನ್ನು ತಲುಪಲು ನಾವು ವಿಫಲರಾಗಿದ್ದೇವೆ ಎಂದು ಬೇಸರಿಸಿದರು.
ಜಿಲ್ಲೆಯ ಯುವ ಜನರಿಗೆ ಸಂವಿಧಾನದ ಮಹತ್ವ ಮೂಲ ತತ್ವಗಳನ್ನು ತಿಳಿಸುವುದೇ ಈ ಶಿಬಿರದಲ್ಲಿ ಮೂಲ ಉದ್ದೇಶ. ಜೊತೆಗೆ ನಾವು ಅಭಿವೃದ್ಧಿಯತ್ತ ಸಾಗಲು ಇರುವ ಒಂದೇ ದಾರಿ ಎಂದರೆ ಅದು ನಮ್ಮ ಸಂವಿಧಾನ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ನಾನು ಯು.ಪಿ.ಎಸ್.ಸಿ. ಪರೀಕ್ಷೆ ಬರೆಯುವ ಸಮಯದಲ್ಲಿ ಮೊಟ್ಟ ಮೊದಲು ನಾನು ಓದಿದ್ದು ಸಂವಿಧಾನದ ಪುಸ್ತಕ. ಮೊದಲು ಓದುವಾಗ ಕಾನೂನಿನ ಭಾಷೆ ಅರ್ಥ ಮಾಡಿಕೊಳ್ಳಲು ಕಷ್ಟವಾಯಿತು, ಆದರೆ ಅದನ್ನು ಅರ್ಥ ಮಾಡಿಕೊಂಡಾಗ ಸಮಾಜದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬ ಸಂಗತಿಯನ್ನು ಅರಿತುಕೊಂಡೆ ಎಂದರು.
ನಮಗೆ ಕಷ್ಟ ಬಂದಾಗ ಯಾರೂ ನಮ್ಮ ಜೊತೆ ನಿಲ್ಲುವುದಿಲ್ಲ, ನಮ್ಮ ಬದುಕಿನ ಹೋರಾಟವನ್ನು ನಾವೇ ಮಾಡಬೇಕು ಅದು ಜೀವನದ ತತ್ವ, ನಮ್ಮನ್ನು ಹೊರತು ಪಡಿಸಿ ನಮ್ಮನ್ನು ಕಾಪಾಡುವ ಶಕ್ತಿ ಯಾರಿಗಾದರೂ ಇದೆ ಎಂದರೆ ಅದು ಕೇವಲ ಭಾರತೀಯ ಸಂವಿಧಾನಕ್ಕೆ ಮಾತ್ರ ಎಂದು ಹೇಳಿದರು.
ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಪುಟ್ಟಮಾಧು, ನಗರಸಭೆ ಮಾಜಿ ಅಧ್ಯಕ್ಷ ಸಿದ್ಧರಾಜು, ಮಹಿಳಾ ರೈತ ಮುಖಂಡರಾದ ಸುನಂದ ಜೈರಾಮ್, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ಕೃಷ್ಣ.ಆರ್, ಕಾರ್ಮಿಕ ಮುಖಂಡರಾದ ಸಿ.ಕುಮಾರಿ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.