ಮಂಡ್ಯ: ಕಳೆದ ಬಾರಿಗಿಂತ ಈ ಬಾರಿ ವಿಶೇಷವಾಗಿ 2 ಲಕ್ಷಕ್ಕೂ ಅಧಿಕ ಹೂಗಳನ್ನು ಬಳಿಸಿ ವಿಶೇಷ ಫಲಪುಷ್ಪ ಪ್ರದರ್ಶನವನ್ನು ಮಾಡಲಾಗಿದೆ ಹಾಗೂ ಎಲ್ಲಾ ಇಲಾಖೆಗಳಿಂದ ವಿಭಿನ್ನ ರೀತಿಯಲ್ಲಿ ಇಲಾಖೆಯ ಸೌಲಭ್ಯಗಳ ಕುರಿತು ವಿಶಿಷ್ಟವಾಗಿ ಫಲಪುಷ್ಪ ಪ್ರದರ್ಶನ ಮಾಡಲಾಗಿದ್ದು, ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಹೇಳಿದರು.
ಇಂದು ಮಂಡ್ಯ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಇವರ ಸಂಯುಕ್ತ ಸಂಯುಕ್ತ ಆಶ್ರಯದಲ್ಲಿ ತೋಟಗಾರಿಕೆ ಆವರಣದಲ್ಲಿ ಆಯೋಜಿಸಲಾಗಿದ್ದ ಫಲಪುಷ್ಪ ಪ್ರದರ್ಶನ 2026 ರ ಕಾರ್ಯಕ್ರಮವನ್ನು ತೋಟಗಾರಿಕೆಯ ಆವರಣದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೃಷಿ ಇಲಾಖೆ ವತಿಯಿಂದ ರೈತ ಮಹಿಳೆಯರು ಉದ್ಯಮಿಯಾಗಿ ಪರಿವರ್ತನೆಯಾಗಲು ಹಾಗೂ ಕೃಷಿ ಇಲಾಖೆಯ ವತಿಯಿಂದ ನೀಡಲಾಗುವ ವಿವಿಧ ಅವಕಾಶಗಳ ಕುರಿತು ವಿಶಿಷ್ಟವಾಗಿ ಫಲಪುಷ್ಪ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ಕೃಷಿ ಇಲಾಖೆಯಿಂದ ರೈತ ಮಹಿಳೆಯರಿಗೆ ಉತ್ತೇಜನ ನೀಡಲು ಯಾಂತ್ರೀಕೃತ ಭತ್ತ ನಾಟಿ ಮಾಡುವ ಯಂತ್ರ ಮತ್ತು ರೈತ ಮಹಿಳೆಯನ್ನು ಹೂವಿನ ಕಲಾಕೃತಿಯಲ್ಲಿ ಪ್ರದರ್ಶಿಸಲಾಗಿದೆ ಎಂದು ಹೇಳಿದರು.
ತಾಯಿಯ ಎದೆ ಹಾಲಿನ ಮಹತ್ವ ಕುರಿತು ಸಂದೇಶ ಸಾರಲು ವಿಶೇಷವಾಗಿ ತಾಯಿ ಮಗುವಿಗೆ ಎದೆಹಾಲು ಉಣಿಸುತ್ತಿರುವ ಕಲಾಕೃತಿಯನ್ನು ಪುಷ್ಪ ಪ್ರದರ್ಶನ ಮಾಡಲಾಗಿದೆ. ಫಲಪುಷ್ಪ ಪ್ರದರ್ಶನದ ಟಿಕೆಟ್ ದರವನ್ನು ವಯಸ್ಕರಿಗೆ ರೂ 30, ಮಕ್ಕಳಿಗೆ ರೂ 20 ಮತ್ತು ಶಾಲಾ ವಿದ್ಯಾರ್ಥಿಗಳಿಗೆ (ಯೂನಿಫಾರ್ಮ್ ನಲ್ಲಿ ಬರುವ ಮಕ್ಕಳಿಗೆ) ಉಚಿತ ಎಂದು ತಿಳಿಸಿದರು.
ರೇಷ್ಮೆ ಇಲಾಖೆಯಿಂದ ರೇಷ್ಮೆ ಹುಳುವಿನ ಕಲಾಕೃತಿ ಪ್ರದರ್ಶನ, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ವತಿಯಿಂದ ಹಾಗೂ ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರವಾಸ ತಾಣಗಳ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಜಿಲ್ಲಾ ಎಲ್ಲಾ ಯುವಜನತೆ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಂಡು ಅದರ ಉಪಯೋಗ ಮತ್ತು ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದರು.
ನಂತರ ಎನ್ ಚಲುವರಾಯಸ್ವಾಮಿ ಅವರು ಫಲಪುಷ್ಪ ವಸ್ತು ಪ್ರದರ್ಶನದಲ್ಲಿ ವಿವಿಧ ಇಲಾಖೆಗಳಿಂದ ಆಯೋಜಿಸಲಾಗಿದ್ದ ಕಲಾಕೃತಿಯನ್ನು ಉದ್ಘಾಟಿಸಿ ವಿಕ್ಷಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಶೋಭಾರಾಣಿ ವಿ ಜೆ, ಮೂಡಾ ಅಧ್ಯಕ್ಷ ಬಿ ಪಿ ಪ್ರಕಾಶ್, ಸಣ್ಣ ಕೈಗಾರಿಕೆಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿರಘುನಂದನ್, ಮೈಶುಗರ್ ಅಧ್ಯಕ್ಷ ಸಿ ಡಿ ಗಂಗಾಧರ್, ಕೈಮಗ್ಗ ಜವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ನಾಗೇಂದ್ರ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ರೂಪಶ್ರೀ, ಕೃಷಿ ಇಲಾಖೆಯ ಜೆಡಿ ಆಶೋಕ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.





