ಮಂಡ್ಯ: ರಾಜ್ಯ ಸರ್ಕಾರ ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನದ ಲೆಕ್ಕವನ್ನು ಜಿಲ್ಲೆಯ ಜನತೆ ಕೇಳಬೇಕೆ ಹೊರತು ಸಂಸದರಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಬಳಿ 220 ಕೆ.ವಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಂಡ್ಯ ಜಿಲ್ಲೆಗೆ 10 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅದರ ಅಂಕಿ ಅಂಶಗಳನ್ನು ಇಲಾಖಾವಾರು ನೀಡುವಂತೆ ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಲೆಕ್ಕ ಕೇಳಿದ್ದಾರೆ. ಆದರ ಲೆಕ್ಕವನ್ನು ಜಿಲ್ಲೆಯ ಜನತೆ ಕೇಳಬೇಕೆ ಹೊರತು ಅವರಲ್ಲ ಅವರೇನು ಜಿಲ್ಲೆಯ ಮತದಾರರಲ್ಲ. ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಜಿಲ್ಲೆಯ ಜನತೆ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಜನರ ನಿರೀಕ್ಷೆ ಹುಸಿಯಾಗದಂತೆ ಕೇಂದ್ರ ಸಚಿವರು ಕೆಲಸ ಮಾಡಲಿ ಲೆಕ್ಕ ಕೊಡುವ ಸಮಯ ಬರುತ್ತದೆ ಆಗ ಅಂಕಿ ಅಂಶಗಳ ಪ್ರಕಾರ ನೀಡಲಾಗುವುದು ಎಂದು ಕುಟುಕಿದರು.
ಕಳೆದ ಮೂರು ವರ್ಷಗಳಲ್ಲಿ ಇಡೀ ರಾಜ್ಯದಲ್ಲಿಯೇ ಮೈಸೂರು ಜಿಲ್ಲೆ ಹೊರತು ಪಡಿಸಿದರೆ ಎರಡನೇ ಸ್ಥಾನದಲ್ಲಿ ಅತಿ ಹೆಚ್ಚು ಅನುದಾನ ಬಿಡುಗಡೆಯಾಗಿರೋದು ಮಂಡ್ಯ ಜಿಲ್ಲೆಗೆ ಸ್ವಾತಂತ್ರ್ಯ ಬಂದ ನಂತರ ತೂಬಿನಕೆರೆ ಬಳಿ ಮಾತ್ರ 220 ಕೆವಿ ಸಬ್ ಸ್ಟೇಷನ್ ಮಾತ್ರ ಇತ್ತು. ನಂತರ ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ನಾಗಮಂಗಲದಲ್ಲಿತ್ತು. ಮದ್ದೂರಿಗೂ 220 ಕೆವಿ ಸಬ್ ಸ್ಟೇಷನ್ ನಿರ್ಮಾಣ ಮಾಡಬೇಕೆಂದು 25 ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಆದರೆ, ಶಾಸಕ ಉದಯ್ ಅವರ 3 ವರ್ಷಗಳ ನಿರಂತರ ಪ್ರಯತ್ನದಿಂದಾಗಿ ಇಂದು ಚಾಲನೆ ನೀಡಲಾಗುತ್ತಿದೆ ಎಂದರು.
ಸರ್ಕಾರ ಬರೀ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿಲ್ಲ. ಆದರ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದೇವೆ. ಕೆಆರ್‌ಎಸ್ ಜಲಾಶಯ ನಿರ್ಮಾಣಗೊಂಡ ನಂತರ ಮಾಜಿ ಸಚಿವ ನಾಗೇಗೌಡ ಅವರ ಕಾಲದಲ್ಲಿ ಕೆಲವು ಭಾಗಗಳಲ್ಲಿ ನಾಲೆಗಳ ಆಧುನಿಕರಣ ಮಾಡಲಾಗಿತ್ತು. ಆನಂತರ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಸಿ ನಾಲೆಗಳ ಆಧುನಿಕರಣ ಮಾಡಲಾಗುತ್ತಿದೆ. ಮೈಷುಗರ್ ಕಾರ್ಖಾನೆಗೆ 65 ಕೋಟಿ ರೂ ವೆಚ್ಚದಲ್ಲಿ ಬಾಯ್ಲಿಂಗ್ ಹೌಸ್ ನಿರ್ಮಾಣಕ್ಕೆ ಗುರುವಾರ ಸಂಜೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಲಿದೆ. ಬಳಿಕ ಡಿಸ್ಟಿಲರಿ ವಿಭಾಗ ನಿರ್ಮಾಣ ಮಾಡಿದರೆ ಮೈಷುಗರ್ ಕಾರ್ಖಾನೆ ಯಾವುದೇ ಲೋಪದೋಷಗಳಿಲ್ಲದೆ ಕಾರ್ಯಾರಂಭ ಮಾಡಲಿದೆ ಎಂದರು.
ಸೂಳೆಕೆರೆ ಅಭಿವೃದ್ಧಿ, ಮದ್ದೂರು ನಗರದ ರಸ್ತೆ ಅಗಲೀಕರಣ, 220 ಕೆವಿ ಸಬ್ ಸ್ಟೇಷನ್, ಕೆಮ್ಮಣ್ಣುನಾಲಾ ಅಭಿವೃದ್ಧಿ, ಗ್ರಾಮೀಣ ಪ್ರದೇಶಗಳ ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಕ್ಷೇತ್ರದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಶಾಸಕ ಉದಯ್ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಶಾಸಕ ಕೆ.ಎಂ.ಉದಯ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ವರ್ಷದ ಯುಗಾದಿ ಹಬ್ಬದ ವೇಳೆಗೆ 220 ಕೆವಿ ಸಬ್ ಸ್ಟೇಷನ್ ಕಾಮಗಾರಿ ಉದ್ಘಾಟನೆಗೊಂಡು ರೈತರಿಗೆ ಹಾಗೂ ತಾಲೂಕಿನ ಜನತೆಗೆ ಅನುಕೂಲ ಕಲ್ಪಿಸಬೇಕು ಈ ಸಂಬಂಧ ನನ್ನಿಂದ ಯಾವುದೇ ಸಹಕಾರವನ್ನು ನೀಡುತ್ತೇನೆ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕ್ಷೇತ್ರದಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆಗಳ ಬಗ್ಗೆ ದಿನನಿತ್ಯ ಸಾಕಷ್ಟು ದೂರುಗಳನ್ನು ನೀಡುತ್ತಿದ್ದರು. ಹೀಗಾಗಿ ಸರ್ಕಾರದಿಂದ 800 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಕೆರೆಗಳು ಮತ್ತು ನಾಲೆಗಳ ಆಧುನೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಶೀಘ್ರವಾಗಿ ಪೂರ್ಣಗೊಳ್ಳಲಿದ್ದು, ಹಲವು ವರ್ಷಗಳಿಂದ ತಲೆದೊರುತ್ತಿದ್ದ ವಿದ್ಯುತ್ ಸಮಸ್ಯೆ ಬಗ್ಗೆ ಸರ್ಕಾರದ ಹಂತದಲ್ಲಿ ಸಾಕಷ್ಟು ಹೋರಾಟ ಮಾಡಿ 188 ಕೋಟಿ ರೂ ವೆಚ್ಚದಲ್ಲಿ 220 ಕೆವಿ ಸಬ್ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದ್ದು ಮುಂದಿನ ಒಂದು ವರ್ಷದೊಳಗೆ ಕಾಮಗಾರಿ ಮುಕ್ತಾಯವಾಗಿ ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆಗೆ ಮುಕ್ತಿ ನೀಡಲಾಗುವುದು ಎಂದರು.
ಕ್ಷೇತ್ರದಲ್ಲಿ 1800 ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವುದನ್ನು ಸಹಿಸದೆ ವಿರೋಧಿಗಳು ನನ್ನ ವಿರುದ್ಧ ಅನಗತ್ಯ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕ್ಷೇತ್ರದ ಮತದಾರರು ಕಿವಿಗೊಡಬಾರದು. ನನಗೆ ರಾಜಕೀಯ, ಅಧಿಕಾರ ಮುಖ್ಯವಲ್ಲ ಕ್ಷೇತ್ರದ ಅಭಿವೃದ್ಧಿ ಜನರ ಹಿತ ಮುಖ್ಯವಾಗಿದೆ ಎಂದು ವಿರೋಧಿಗಳ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಶಾಸಕ ಹಾಗೂ ಚೆಸ್ಕಾಂ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, 220 ಕೆವಿ ಸಬ್ ಸ್ಟೇಷನ್ ಯೋಜನೆಯನ್ನು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ 188 ಕೋಟಿ ಅನುದಾನ ತಂದಿರುವುದು ಪ್ರಶಂಸನೀಯ ಸಂಗತಿಯಾಗಿದ್ದು, ಈ ಕಾಮಗಾರಿ ಪೂರ್ಣಗೊಂಡರೆ ಮದ್ದೂರು, ಶ್ರೀರಂಗಪಟ್ಟಣ, ನಾಗಮಂಗಲ, ಮಳವಳ್ಳಿ ತಾಲೂಕುಗಳಿಗೆ ಅನುಕೂಲವಾಗಲಿದೆ. ಆದ್ದರಿಂದ ರೈತರು ಹಾಗೂ ಜನತೆಯ ಪರವಾಗಿ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಹೊಸದಾಗಿ ಆಯ್ಕೆಯಾಗಿರುವ 38 ಶಾಸಕರಲ್ಲಿ ಕೆ.ಎಂ.ಉದಯ್ ಅವರು ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುವ ಮೂಲಕ ತಾಲೂಕಿಗೆ ಅತೀ ಹೆಚ್ಚು ಅನುದಾನ ಬಿಡುಗಡೆಗೊಳಿಸಿ ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಜನ ಮನ್ನಣೆಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಬ್ ಸ್ಟೇಷನ್ ನಿರ್ಮಾಣದಿಂದ ಹತ್ತಾರು ಗ್ರಾಮಗಳು, ರೈತಾಪಿ ಜನರ ಕೃಷಿ ಪಂಪ್ ಸೆಟ್, ಕುಡಿಯುವ ನೀರಿನ ಯೋಜನೆಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಅನುಕೂಲವಾಗಲಿದೆ ಹಾಗೂ ಹೆಚ್ಚಿನ ಗ್ರಾಹಕರಿಗೆ ವಿದ್ಯುತ್ ಪೂರೈಸಬಹುದಾಗಿದ್ದು, ಇದರ ಜೊತೆಗೆ ಸೋಮನಹಳ್ಳಿ, ಗೆಜ್ಜಲಗೆರೆ ಕೈಗಾರಿಕಾ ಪ್ರದೇಶಗಳಿಗೆ ಅಡಚಣೆ ರಹಿತ ವಿದ್ಯುತ್ ಪೂರೈಸಬಹುದಾಗಿದೆ ಎಂದು ತಿಳಿಸಿದರು.





