ಮಂಡ್ಯ: ರಾಜ್ಯದಲ್ಲಿ ದೇವಾಲಯ ಶಿಲ್ಪಕಲೆ ಪದವಿ ಕಾಲೇಜಿನ ಅಗತ್ಯವಿದೆ ಎಂದು ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಗೆ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ವತಿಯಿಂದ ನಿರ್ಮಾಣವಾಗುವ ದೇವಸ್ಥಾನ ಅಥವಾ ಪುನರ್ ಸ್ಥಾಪನೆ ಕೆಲಸ ಮಾಡಬೇಕೆಂದರೆ ದೇವಾಲಯ ವಾಸ್ತು ಶಿಲ್ಪ ಕಲೆಯ ಪದವಿ ಪ್ರಮಾಣ ಪತ್ರವನ್ನು ನೀಡಬೇಕು ಎಂಬ ನಿಯಮವಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ದೇವಾಲಯ ಶಿಲ್ಪಕಲೆ ಪದವಿ ಕಾಲೇಜಿನ ಅಗತ್ಯವಿದೆ. ಕೆಲಸದಲ್ಲಿ ಏಷ್ಟೇ ಪರಿಣಿತರಾದರು ಪದವಿ ಪ್ರಮಾಣ ಪತ್ರವಿಲ್ಲದಿದ್ದರೆ ಕೆಲಸ ಮಾಡಲು ಅರ್ಹತೆ ಇರುವುದಿಲ್ಲ ಎಂದರು.
ಶಿಲ್ಪಕಲೆಯ ನಾಡಾದ ನಮ್ಮ ರಾಜ್ಯದಲ್ಲಿ ದೇವಾಲಯ ವಾಸ್ತುಶಿಲ್ಪಕಲೆ ಕಾಲೇಜು ತೆರೆದು ಪದವಿ ನೀಡಿದರೆ ಅನೇಕ ಕೆಲಸಗಳು ನಮ್ಮ ಕರ್ನಾಟಕ ಜನಕ್ಕೆ ದೊರೆಯುತ್ತದೆ ಎಂದರು.
ಶಿಲ್ಪಿಗಳು ಶತಮಾನಗಳಿಂದ ದೇಶಕ್ಕೆ ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದ್ದೇವೆ. ಅದರಲ್ಲಿ ಅಗ್ರಗಣ್ಯರು ಅಮರಶಿಲ್ಪಿ ಜಕಣಾಚಾರ್ಯರು. ಅವರು ನಿರ್ಮಿಸಿರುವ ದೇವಾಲಯಗಳು ಇವತ್ತಿಗೂ ತನ್ನ ಕಲೆ ಮಾಸಿ ಹೋಗದಂತೆ ತನ್ನ ಅಸ್ತಿತ್ವ ಕಾಪಾಡಿಕೊಂಡಿವೆ. ಶಿಲ್ಪಿಗಳು ನಿರ್ಮಿಸುವ ವಿಗ್ರಹ ಅವರು ಸತ್ತ ನಂತರವೂ ಪೂಜೆಗೊಳಪಡುತ್ತದೆ, ನನಗೆ ಬೆಲೆ ಕೊಡುತ್ತಿರುವುದು ನಾನೊಬ್ಬ ಶಿಲ್ಪಿ ಎಂದೆಲ್ಲಾ ನಾನು ಮಾಡಿದ ಕೆಲಸಕ್ಕೆ ಅದರ ಹಿಂದೆ ಇರುವ ಕಲೆ ಶ್ರಮಕ್ಕೆ ಮತ್ತು ಅದರ ಇತಿಹಾಸಕ್ಕೆ ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ ಮಾತನಾಡಿ, ಅರುಣ್ ಯೋಗಿರಾಜ ತುಂಬಾ ಪರಿಶ್ರಮ ಪಟ್ಟು ಅಯೋಧ್ಯೆಯಲ್ಲಿ ಸುಂದರವಾದ ರಾಮ ಮೂರ್ತಿಯನ್ನು ಕೆತ್ತಿ ಇಡೀ ವಿಶ್ವದಲ್ಲೇ ಹೆಸರು ಮಾಡಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.
ರೈತರ ಕುಡುಗೋಲು ತಟ್ಟಿಸುವುದರಿಂದ ಹಿಡಿದು ಸಾಮಾನ್ಯ ವ್ಯಕ್ತಿಗಳು ಮನೆ ನಿರ್ಮಾಣ ಮಾಡುವುದಕ್ಕೂ ನಿಮ್ಮ ಕಸುಬುಗಳ ಅಗತ್ಯವಿದೆ ಇಂತಹ ಉತ್ತಮ ಸೇವೆಯನ್ನು ಸಾಮಾಜಕ್ಕೆ ಸಲ್ಲಿಸುತ್ತಿರುವ ವಿಶ್ವಕರ್ಮ ಜನಾಂಗದ ಬಗ್ಗೆ ಗೌರವ ಇದೆ ಎಂದರು.
ಕಾರ್ಯಕ್ರಮದಲ್ಲಿ ನಗರರಸಭೆ ಅಧ್ಯಕ್ಷ ಎಂ ಪಿ ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ ವಿ ನಂದೀಶ್, ಸಾಹಿತಿ ಕೆ.ಪಿ ಸ್ವಾಮಿ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.