Mysore
16
scattered clouds

Social Media

ಬುಧವಾರ, 21 ಜನವರಿ 2026
Light
Dark

ಕಬ್ಬು ಬೆಳೆಗಾರರ ಬಾಕಿ ಹಣವನ್ನು ಸಕ್ಕರೆ ಕಾರ್ಖಾನೆಗಳು ಶೀಘ್ರವಾಗಿ ಪಾವತಿಸಿ: ಡಾ.ಕುಮಾರ

ಮಂಡ್ಯ.ನ: ಜಿಲ್ಲೆಯ ಕಬ್ಬು ಬೆಳೆಗಾರರ ಬಾಕಿ ಹಣವನ್ನು ಸಕ್ಕರೆ ಕಾರ್ಖಾನೆಗಳು ಯಾವುದೇ ವಿಳಂಬ ಮಾಡದೆ ಶೀಘ್ರವಾಗಿ ಪಾವತಿ ಮಾಡಬೇಕು ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ರೈತರ ಸಮಸ್ಯೆಗಳನ್ನು ಚರ್ಚಿಸಲು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಷುಗರ್ ಕಾರ್ಖಾನೆಯ ಬಾಯ್ಲರ್ ಹೌಸ್ ನಿರ್ಮಾಣದ ಕುರಿತು ಡಿ.ಪಿ.ಆರ್ ಕಳುಹಿಸಲಾಗಿದೆ. ಶೀಘ್ರವಾಗಿ ಮೈಷುಗರ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಥಾಪನೆ ಮಾಡಲಾಗುವುದು ಎಂದರು.

ಸಿ.ಡಿ.ಎಸ್ ನಾಲೆ ಸುಮಾರು 400 ವರ್ಷಗಳ ಹಳೆಯ ನಾಲೆಯಾಗಿದೆ, ಪ್ರಸ್ತುತ ಸಿ.ಡಿ.ಎಸ್ ನಾಲೆಯ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ ರೈತರು ಸಹಕರಿಸಬೇಕು, ಶ್ರೀರಂಗಪಟ್ಟಣದಲ್ಲಿ ಸಿ.ಡಿ.ಎಸ್ ನಾಲೆ ಒಡೆದು ರೈತರಿಗೆ ಉಂಟಾಗಿದ್ದ ಬೆಳೆ ಹಾನಿ ಕುರಿತಾಗಿ ಸಮೀಕ್ಷೆ ಮಾಡಲಾಗಿದ್ದು ಪರಿಹಾರದ ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಅರ್ಹ ಫಲಾನುಭವಿಗಳ ಖಾತೆಗೆ ಪರಿಹಾರದ ಹಣ ನೇರವಾಗಿ ಜಮೆಯಾಗುತ್ತದೆ ಎಂದು ಹೇಳಿದರು.

ಬ್ಯಾಂಕ್‌ಗಳು ರೈತರಿಗೆ ಸರ್ಕಾರ ನೀಡುವ ಪರಿಹಾರದ ಹಣ ಹಾಗೂ ಗೌರವಧನವನ್ನು ಬ್ಯಾಂಕುಗಳು ಸಾಲಕ್ಕೆ ಮನ್ನ ಮಾಡಿಕೊಳ್ಳುವಂತಿಲ್ಲ, ನಾವು ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿ ಏನನ್ನು ಮಾಡುವಂತಿಲ್ಲ. ರೈತರು ಬ್ಯಾಂಕ್‌ಗಳಲ್ಲಿ ತಮಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೊಡಿ ಆರ್‌ಬಿಐ ನಿಯಮಗಳ ಸಡಿಲೀಕರಣಕ್ಕೆ ಶಿಫಾರಸ್ಸು ಮಾಡಿ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.

ರೈತರಿಗೆ ಬಾಧಿಸುತ್ತಿರುವ ಮೈಕ್ರೋ ಫೈನಾನ್ಸ್ ಗಳಿಗೆ ಈಗಾಗಲೇ ಎರಡು ಸಭೆ ನಡೆಸಿ ಸೂಚನೆ ನೀಡಲಾಗಿದೆ, ಮೈಕ್ರೋ ಫೈನಾನ್ಸ್‌ಗಳು ಜಿಲ್ಲಾಡಳಿತದ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿರುವ ಕುರಿತು ಪರೀಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಇದನ್ನು ಓದಿ: ಆರನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಹೋರಾಟ

ಕೆಆರ್‌ಎಸ್ 20 ಕಿ‌.ಮೀ ವ್ಯಾಪ್ತಿಯಲ್ಲಿ ಬ್ಲಾಸ್ಟಿಂಗ್ ಮಾಡಲು ಅವಕಾಶ ಕೊಟ್ಟಿಲ್ಲ, ಸದರಿ ವ್ಯಾಪ್ತಿಯಲ್ಲಿ ಯಾರೆ ಬ್ಲಾಸ್ಟಿಂಗ್ ಮಾಡುತ್ತಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಜಿಲ್ಲೆಯಲ್ಲಿ ಯಾರೆ ಅಕ್ರಮವಾಗಿ ಗಣಿಗಾರಿಕೆ ಮಾಡಿದರೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜಾರಿಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ತಾತ್ಕಾಲಿಕ ಭತ್ತ ರಾಗಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಶಾಶ್ವತವಾಗಿ ನೋಂದಣಿ ಕೇಂದ್ರಗಳನ್ನು ತೆರೆಯಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಪ್ರಸ್ತುತ ರಾಗಿ ಕೊಡಲು ರೈತರು ಮುಂದಾಗಿದ್ದಾರೆ ಭತ್ತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೊಂದಣಿ ಆಗಿಲ್ಲ, ನೊಂದಣಿಗೆ ಇನ್ನೂ ದಿನಗಳು ಬಾಕಿ ಇರುವುದರಿಂದ ರೈತರು ಭತ್ತಕ್ಕೆ ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.

ಸಭೆಯಲ್ಲಿ ಮೈಷುಗರ್ ಅಧ್ಯಕ್ಷ ಸಿ.ಡಿ ಗಂಗಾಧರ್, ಕಾವೇರಿ ನೀರಾವರಿ ನಿಗಮದ ರಘುರಾಮ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪುಷ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್, ರೈತ ಮುಖಂಡರುಗಳಾದ ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಮಂಜೇಶ್ ಗೌಡ, ಸಿ ಕುಮಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:
error: Content is protected !!