ಮಂಡ್ಯ : ಸಾಮಾಜಿಕ ಬಹಿಷ್ಕಾರ ನಿಷೇಧ ವಿಧೇಯಕದಡಿ ಶಿಕ್ಷೆ ಪ್ರಮಾಣ 7 ವರ್ಷಕ್ಕೆ ಹೆಚ್ಚಿಸಬೇಕು. ಎಸ್ಸಿ, ಎಸ್ಟಿ ಸಮುದಾಯ ಪ್ರತಿ ಕುಟುಂಬಕ್ಕೆ ತಲಾ 25 ಲಕ್ಷ ರೂ.ವಿಶೇಷ ಅನುದಾನ ಮೀಸಲಿಡಲು ಸರ್ಕಾರ ಮುಂದಾಗಬೇಕು ಎಂದು ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹಿಸಿದರು.
ವಿವಿಧ ಕಾರಣಗಳಿಗೆ ಗುರಿಯಾಗಿರಿಸಿಕೊಂಡು ಸಮಾಜದಿಂದ ಹಾಗೂ ಹಳ್ಳಿಗಳಿಂದ ಬಹಿಷ್ಕರಿಸುವ ಪದ್ಧತಿ ಅಪರಾಧ ಎಂದು ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಸಾಮಾಜಿಕ ಬಹಿಷ್ಕಾರ ವಿಧೇಯಕ ಜಾರಿ ಮಾಡುತ್ತಿದ್ದು, ಶಿಕ್ಷೆಯ ಪ್ರಮಾಣವನ್ನು 3 ವರ್ಷದಿಂದ 7 ವರ್ಷಗಳಿಗೆ ಹೆಚ್ಚಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರು ಚಳಿಗಾಲದ ಅಧಿವೇಶನದಲ್ಲಿ 2023ರಿಂದ ಇಲ್ಲಿಯವರೆಗೆ 3 ವರ್ಷಗಳಲ್ಲಿ 25 ಸಾವಿರ ಕೋಟಿ ರೂ. ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗಿದೆ ಎಂದು ತಿಳಿಸಿದ್ದು, 2013ರಿಂದ ಇಲ್ಲಿವರೆಗೆ 7 ಲಕ್ಷ ಕೋಟಿ ರೂ. ಅನುದಾನವನ್ನು ಅನ್ಯ ಯೋಜನೆಗಳಿಗೆ ಬಳಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಪ್ರತಿ ಎಸ್ಸಿ ಮತ್ತು ಎಸ್ಟಿ ಕುಟುಂಬಗಳಿಗೆ ತಲಾ 25 ಲಕ್ಷ ರೂ.ವಿಶೇಷ ಅನುದಾನ ಘೋಷಿಸಬೇಕು. ಹಾಗೆಯೇ ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣ ಬಳಕೆಗೆ ಅನುಕೂಲ ಮಾಡಿಕೊಡುವ 7(ಸಿ) ಕಾಲಂ ಅನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ, ಅರೆಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಋತುಚಕ್ರ ವೇತನ ಸಹಿತ ರಜೆ ನೀಡಲಾಗುತ್ತಿದೆ. ಅಂತೆಯೇ ರೈತ, ಕೃಷಿ ಕೂಲಿ ಕಾರ್ಮಿಕ ಮಹಿಳೆಯರಿಗೂ ಋತುಚಕ್ರ ರಜೆ ಸಹಿತ ಕೂಲಿ ನೀಡುವ ನಿರ್ಧಾರ ಮಾಡಬೇಕು. ತಪ್ಪಿದಲ್ಲಿ ಮಹಿಳೆಯರಿಂದಲೇ ಮುಖ್ಯಮಂತ್ರಿ ಹಾಗೂ ಎಲ್ಲಾ ಮಂತ್ರಿಗಳಿಗೆ ಕಂಡಕಂಡಲ್ಲಿ ಘೇರಾವ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಬಿ.ಆನಂದ್, ಮಹಿಳಾ ಜಿಲ್ಲಾಧ್ಯಕ್ಷೆ ಸುಶ್ಮಿತ ಆನಂದ್, ಜಿಲ್ಲಾ ಸಂಘಟನ ಕಾರ್ಯದರ್ಶಿ ನಾಗರಾಜ್ ಈಚಗೆರೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.




