ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಹೇಳಿದರು.
ತಾಲ್ಲೂಕಿನ ಪಿ.ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಕಾರೇಕುರ ಗ್ರಾಮದಲ್ಲಿ ಪಾಲಹಳ್ಳಿ ಆಯುಷ್ಮಾನ್ ಆರೋಗ್ಯ ಕೇಂದ್ರ ಹಾಗೂ ಪಿ.ಹೊಸಹಳ್ಳಿ ಗ್ರಾಪಂ ಸಂಯೋಗದಲ್ಲಿ ಆಯೋಜಿಸಿದ್ದ ತಂಬಾಕು ಮುಕ್ತ ಯುವ ಅಭಿಯಾನ ಅಂಗವಾಗಿ ಗುಲಾಬಿ ಆಂದೋಲನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ತಂಬಾಕಿನಲ್ಲಿ ಸಾವಿರಾರು ವಿಷಕಾರಿ ರಾಸಾಯನಿಕ ವಸ್ತುಗಳಿದ್ದು, ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಇಂತಹ ವಿಷಕಾರಿ ತಂಬಾಕು ಸೇವನೆ ತ್ಯಜಿಸಿ, ಆರೋಗ್ಯಯುತ ಜೀವನ ನಡೆಸಬೇಕೆಂದು ಸಲಹೆ ನೀಡಿದರು.
ಇದನ್ನು ಓದಿ: ಆಂಬುಲೆನ್ಸ್ ತುರ್ತು ಮೀಸಲು ಮಾರ್ಗಕ್ಕೆ ಜಯಾ ಬಚ್ಚನ್ ಒತ್ತಾಯ
ನಂತರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಮಾತನಾಡಿ, ತಂಬಾಕು ಉತ್ಪನ್ನಗಳ ಸೇವನೆಯಿಂದ ಯುವ ಸಮೂಹ ದಾರಿ ತಪ್ಪುತ್ತಿದ್ದು, ಶಾಲಾ-ಕಾಲೇಜು ಹಂತದಲ್ಲಿಯೇ ತಂಬಾಕು ಸೇವನೆ ಚಟಕ್ಕೆ ಅಂಟಿಕೊಳ್ಳುತ್ತಿರುವುದು ವಿಷಾಧದ ಸಂಗತಿ. ಆದ್ದರಿಂದ ಕೋಟ್ಪಾ-೨೦೦೩ ಕಾಯ್ದೆ ಜಾರಿಗೆ ಬಂದಿದ್ದು, ಇದನ್ನು ಅರಿತುಕೊಳ್ಳಬೇಕೆಂದು ಮಾಹಿತಿ ನೀಡಿದರು.
ಪಿಡಿಒ ಶಶಿಕಲಾ ಮಾತನಾಡಿ, ಕಾರೇಕುರ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮ ಎಂದು ಘೋಷಿಸಲಾಗಿದ್ದು, ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಬಿ.ಹೇಮಣ್ಣ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಗ್ರಾಮದಲ್ಲಿ ಸಂಚರಿಸಿ ತಂಬಾಕು ಸೇವನೆ ಹಾಗೂ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವವರ ಅಂಗಡಿಗಳಿಗೆ ಭೇಟಿ ನೀಡಿ, ಇನ್ನು ಮುಂದೆ ತಂಬಾಕು ಸೇವನೆ ಹಾಗೂ ಮಾರಾಟ ಮಾಡದಿರಿ ಎಂದು ಕರಪತ್ರದ ಜೊತೆ ಗುಲಾಬಿ ಹೂ ನೀಡಿ ವಿನಂತಿಸಲಾಯಿತು.
ಈ ವೇಳೆ ವೇಳೆ ಗ್ರಾಮದ ಮುಖಂಡರಾದ ಸಿದ್ದೇಗೌಡ, ಕೆ.ಬಿ.ಸ್ವಾಮಿ, ವೆಂಕಟೇಶ್, ಸಮುದಾಯ ಆರೋಗ್ಯ ಅಧಿಕಾರಿ ಅನುಷಾ, ಶಾಲಾ ಮುಖ್ಯ ಶಿಕ್ಷಕಿ ಸುಮಾದೇವಿ, ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ರಮ್ಯಾ, ಅಂಗನವಾಡಿ ಕಾರ್ಯಕರ್ತೆ ಗಾಯತ್ರಿ, ಆಶಾ ಕಾರ್ಯಕರ್ತೆ ಬಿಂದು, ಪಾರ್ವತಿ, ನಾಗರತ್ನ, ಮಹಿಳಾ ಸಂಘದ ಪ್ರತಿನಿಧಿಗಳು, ಸಾರ್ವಜನಿಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.




