ಮಂಡ್ಯ: ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಇತರೆ ಯೋಜನೆಗಳಿಗೆ ಹೋಲಿಸಿದರೆ ಗೃಹಲಕ್ಷ್ಮಿಯೋಜನೆಯಲ್ಲಿ ಹೆಚ್ಚಾಗಿ ಸಮಸ್ಯೆಗಳು ಕಂಡು ಬರುತ್ತಿದ್ದು, ಗೃಹಲಕ್ಷ್ಮಿ ಯೋಜನೆಯ ಸಮಸ್ಯೆಗಳನ್ನು ಪರಿಹರಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಿಕ್ಕಲಿಂಗಯ್ಯ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಲ್ಲಿ 12,000 ಫಲಾನುಭವಿಗಳಿಗೆ ಕಳೆದ ಬಾರಿ ಗೃಹಲಕ್ಷ್ಮಿ ಹಣ ತಲುಪಿಲ್ಲ ಎಂದು ಮಾಹಿತಿ ಬಂದಿದ್ದು, ಈ ಸಮಸ್ಯೆ ಪರಿಹರಿಸುವಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಎಂದರು.
ಇದನ್ನು ಓದಿ : ರಾಜಕೀಯಕ್ಕಾಗಿ ಗ್ಯಾರಂಟಿ ಯೋಜನೆ ಮಾಡುತ್ತಿಲ್ಲ: ಸಿಎಂ ಸಿದ್ದರಾಮಯ್ಯ
ಅನ್ನಭಾಗ್ಯ ಯೋಜನೆಯಡಿಯಲ್ಲಿ 2025ರ ಫೆಬ್ರವರಿ ಮಾಹೆಯಿಂದ ನಗದು ಬದಲು ಅಕ್ಕಿ ನೀಡಲಾಗುತ್ತಿದೆ. ಪ್ರತಿ ಮಾಹೆಯಲ್ಲಿ ಸಾರ್ವಜನಿಕರಿಗೆ ವಿತರಿಸುವ ಅಕ್ಕಿ ಮತ್ತು ರಾಗಿಯ ಅಂಕಿ – ಅಂಶ ವರದಿಯನ್ನು ಮುಂದಿನ ಸಭೆಗಳಲ್ಲಿ ಸಲ್ಲಿಸಬೇಕು ಎಂದು ಹೇಳಿದರು.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 2023 ರ ಜೂನ್ ಮಾಹೆಯಿಂದ 2025 ರ ಆಗಸ್ಟ್ ಮಾಹೆಯವರೆಗೆ ಒಟ್ಟು 1599.17 ಲಕ್ಷ ಮಹಿಳೆಯರು ಉಚಿತ ಟಿಕೆಟ್ ಪಡೆದು ಸಂಚರಿಸಿದ್ದಾರೆ. ಜಿಲ್ಲೆಯಲ್ಲಿ ಕೆಲವೆಡೆ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ಗಳು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರು ಬರುತ್ತಿದೆ. ಡಿಪೋ ಮ್ಯಾನೇಜರ್ ಗಳಿಗೆ ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸಲು ತಿಳಿಸಿ ಎಂದರು.





