ಮಂಡ್ಯ: ದುರ್ಬಲ ವರ್ಗದ ಸಾರ್ವಜನಿಕರಿಗೆ ಉಚಿತವಾಗಿ ಕಾನೂನು ಸೇವೆಗಳನ್ನು ಕೊಡುವ ವ್ಯವಸ್ಥೆ ಜಾರಿಯಲ್ಲಿದ್ದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕುರಿತಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಎನ್ ಅವರು ಹೇಳಿದರು.
ಇಂದು ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ವಕೀಲರ ಸಂಘ (ರಿ), ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದೊಂದಿಗೆ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಲಯಗಳಲ್ಲಿ ನ್ಯಾಯ ದೊರಕಿಸಲು ಕಾನೂನು ಸೇವೆಗಳ ಪ್ರಾಧಿಕಾರ ಸಾರ್ವಜನಿಕರಿಗೆ ಸಹಾಯ ಮಾಡುತ್ತದೆ ಎಂದು ಶೇಕಡಾ.90ರಷ್ಟು ಜನರಿಗೆ ತಿಳಿದಿಲ್ಲ. ಜನರಿಗೆ ಕಾನೂನು ಜ್ಞಾನ ಇರಬೇಕು, ಕಾನೂನು ಜ್ಞಾನ ಇಲ್ಲವಾದಲ್ಲಿ ಕೋರ್ಟ್ ಕಚೇರಿ ಅಲೆದಾಡಬೇಕಾಗುತ್ತದೆ, ಕಾನೂನು ಸೇವೆಗಳ ಪ್ರಾಧಿಕಾರ ದುರ್ಬಲ ವರ್ಗದವರಿಗೆ, ಶೋಷಿತರ ಕಾನೂನು ಅರಿವು ಹಾಗೂ ತಿಳುವಳಿಕೆ ತಿಳಿಸುವ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಇದನ್ನು ಓದಿ : ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ 142 ಮನೆಗಳು ನಿರ್ಮಾಣ: ಜಿಲ್ಲಾಧಿಕಾರಿ ಡಾ.ಕುಮಾರ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಅಧಿಕಾರಿಗಳು ಕಾನೂನಡಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಮನದಟ್ಟು ಮಾಡಿಕೊಳ್ಳುವುದರ ಜೊತೆಗೆ ಕಾನೂನು ರಕ್ಷಣೆ ಮಾಡಬೇಕು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧ್ವನಿ ಇಲ್ಲದವರಿಗೆ ಧ್ವನಿ ನೀಡುವ ಕಾರ್ಯ ನಿರ್ವಹಿಸುತ್ತಿದೆ. ಕಾನೂನಿನ ನಿಯಮಗಳು ಉಲ್ಲಂಘನೆಗೊಳ್ಳದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಎಷ್ಟೋ ಜನಗಳಿಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆಗಳನ್ನು ಪಡೆಯಬಹುದು ಎಂಬುದು ತಿಳಿದೇ ಇಲ್ಲ. ಅಧಿಕಾರಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ನಾಮಫಲಕಗಳು ಅಳವಡಿಸುವ ಮೂಲಕ ಅರಿವು ಮೂಡಿಸಿ, ಕಾನೂನು ಮತ್ತು ನಿಯಮಗಳು ಜೀವನದುದ್ದಕ್ಕೂ ನಮ್ಮ ಜೊತೆ ಇರುತ್ತದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕಾನೂನು ಪಾಲನೆಗಳಿಗಿಂತ ಕಾನೂನು ಉಲ್ಲಂಘಿಸುವವರು ಹೆಚ್ಚಾಗುತ್ತಿದ್ದಾರೆ. ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇವೆಲ್ಲವೂ ನಿಲ್ಲಬೇಕು. ಕಾನೂನು ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಇದನ್ನು ಓದಿ: ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಉಗ್ರರು
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್ ನಂದಿನಿ ಅವರು ಮಾತನಾಡಿ, ಕಾನೂನು ಸೇವೆಗಳ ಪ್ರಾಧಿಕಾರದಿಂದ ಮಕ್ಕಳು, ಮಹಿಳೆಯರು, ದುರ್ಬಲ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಉಚಿತವಾಗಿ ಕಾನೂನು ಸೇವೆಗಳನ್ನು ಪಡೆಯಲು ಅವಕಾಶ ಇದೆ, ಅಧಿಕಾರಿಗಳು ನಿಜವಾಗಿಯೂ ಕಾನೂನು ನೆರವು ಅಗತ್ಯವಿರುವ ಜನರಿಗೆ ಇದರ ಕುರಿತಾಗಿ ಮಾಹಿತಿ ನೀಡಿ ಎಂದು ಹೇಳಿದರು.
ಕಾನೂನು ಸೇವೆಗಳ ಪ್ರಾಧಿಕಾರದ ಕುರಿತಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ವಿಶೇಷ ಶಿಬಿರಗಳನ್ನು ಆಯೋಜಿಸಿ, ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಕ್ರಿಮಿನಲ್, ಸಿವಿಲ್ ಹಾಗೂ ಅರೆ ನ್ಯಾಯಾಲಯಗಳಲ್ಲೂ ಕೂಡ ಸೇವೆ ಪಡೆಯಬಹುದು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಆನಂದ್.ಎಂ ಅವರು ಮಾತನಾಡಿ ಮಕ್ಕಳಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಹಾಗೂ 3 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಎಲ್ಲಾ ಜಾತಿ ವರ್ಗದ ಜನರಿಗೆ ಉಚಿತ ಕಾನೂನು ಸೇವೆ ಹಾಗೂ ಅರಿವು ನೀಡಲಾಗುತ್ತಿದೆ, ಜಿಲ್ಲಾ ಮಟ್ಟದಲ್ಲಿ ಅನೇಕ ಕಾನೂನು ಅರಿವುಗಳ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜಿಲ್ಲೆಯನ್ನು ಬಾಲ್ಯ ವಿವಾಹ, ಭ್ರೂಣ ಹತ್ಯೆ ಮುಕ್ತ ಹಾಗೂ ಎಲ್ಲರಿಗೂ ನ್ಯಾಯ ಒದಗಿಸುವ ಎಲ್ಲಾ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.





