ಮದ್ದೂರು : ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಪಕ್ಷದ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ತಾಲ್ಲೂಕಿನ ಕೊಪ್ಪ ಹೋಬಳಿಯ ಕೌಡ್ಲೆ ಗ್ರಾಮದಲ್ಲಿ ೫೦ ಲಕ್ಷ ರೂ. ವೆಚ್ಚದ ಪಶು ಚಿಕಿತ್ಸಾ ಕೇಂದ್ರದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಹೈಕಮಾಂಡ್‌ಗಳಾಗಿದ್ದು, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ, ವೇಣುಗೋಪಾಲ್, ಸುರ್ಜೆವಾಲಾ ರಾಷ್ಟ್ರ ಮಟ್ಟದ ಹೈಕಮಾಂಡ್‌ಗಳಾಗಿದ್ದಾರೆ. ಯಾವುದೇ ಗೊಂದಲವಿಲ್ಲದೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನು ಓದಿ: ನಾನೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ : ಶಾಸಕ ಬೇಳೂರು ಗೋಪಾಲಕೃಷ್ಣ
ವಿರೋಧ ಪಕ್ಷದವರು ಯಾವುದೇ ವಿಚಾರಗಳಿಲ್ಲದ ಕಾರಣ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರೆಲ್ಲರ ಅನಿಸಿಕೆಗಳು ಹುಸಿಯಾಗಲಿವೆ ಎಂದು ಹೇಳಿದರು.
ಮೆಕ್ಕೆಜೋಳ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡದ ಕಾರಣ ಹಲವು ಸಮಸ್ಯೆಗಳಿಗೆ ಕಾರಣವಾಗಿದ್ದು ಇದರ ಜತೆಯಲ್ಲಿಯೇ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ಹಣ ನೀಡುವುದರ ಜತೆಗೆ ಕೆಎಂಎಫ್ ಮೂಲಕ ಒಂದು ಲಕ್ಷ ಟನ್ ಮೆಕ್ಕೆಜೋಳವನ್ನು ಖರೀದಿ ಮಾಡಲು ಕ್ರಮ ವಹಿಸಿದೆ. ಡಿಸ್ಟಲರಿಗೆ ೮ ಲಕ್ಷ ರೂ. ಖರೀದಿಗೂ ಮುಂದಾಗಿದ್ದು ಕೇಂದ್ರ ಸರ್ಕಾರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ತಾ.ಪಂ. ಉಪಾಧ್ಯಕ್ಷ ಬಿ.ಎಂ.ರಘು, ಗ್ರಾ.ಪಂ.ಅಧ್ಯಕ್ಷ ಜಿ.ಮನು, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಅಂಜನಾಕುಮಾರಿ, ಮಹಾಲಕ್ಷಿ , ಲೋಕೇಶ್, ಪುಟ್ಟಸ್ವಾಮಿ, ಇಂದ್ರಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ದಿವಾಕರ್, ಮುಖಂಡರಾದ ಕುಮಾರ್ ಕೊಪ್ಪ, ಕ್ರಾಂತಿ ಸಿಂಹ, ಶ್ರೀನಿವಾಸ್, ಕರಿಗೌಡ, ರಘುನಂದನ್, ಪಶು ಸಂಗೋಪನೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ.ಶಿವಲಿಂಗಯ್ಯ, ಸಹಾಯಕ ನಿರ್ದೇಶಕ ಡಾ.ಗೋವಿಂದು, ವೈದ್ಯರಾದ ಶ್ರೀನಿವಾಸ್, ಕಾರ್ತಿಕ್, ಇತರರು ಹಾಜರಿದ್ದರು.





