Mysore
20
overcast clouds
Light
Dark

ಜನಪ್ರತಿನಿಧಿಗಳು ಹೋರಾಟ ಕೈಗೆತ್ತಿಕೊಳ್ಳಬೇಕು : ಸಿಎಸ್ ಪುಟ್ಟರಾಜು

ಮಂಡ್ಯ : ಕಾವೇರಿ ಕೇವಲ ಮಂಡ್ಯ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಇಡೀ ರಾಜ್ಯದ ಜೀವನಾಡಿಯಾಗಿದ್ದು, ಆದ್ದರಿಂದ ಇದನ್ನು ಉಳಿಸಿಕೊಳ್ಳಬೇಕಾದರೆ ಜನಪ್ರತಿನಿಧಿಗಳೂ ಹೋರಾಟವನ್ನು ಕೈಗೆತ್ತಿಕೊಳ್ಳಬೇಕೆಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಆಗ್ರಹಿಸಿದರು.

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 2ನೇ ದಿನವಾದ ಇಂದು ಸಿಎಸ್ ಪುಟ್ಟರಾಜು ಪಾಲ್ಗೊಂಡು ಮಾತನಾಡಿದರು, ನನ್ನ ಜಿಲ್ಲೆಗೆ ಯಾವುದೇ ಹಂತದಲ್ಲೂ ಅನ್ಯಾಯವಾಗಲು ಬಿಡುವುದಿಲ್ಲ. ಕಾವೇರಿ ನದಿ ನೀರು ಸಂಬಂಧ ನಡೆದಿರುವ ಹೋರಾಟದಲ್ಲಿ ಮಾಜಿ ಸಂಸದ ದಿ. ಜಿ.ಮಾದೇಗೌಡ ಅವರ ನೇತೃತ್ವದಲ್ಲಿ ನಡೆಯುತ್ತಿತ್ತು. ರೈತರ ಹೋರಾಟಕ್ಕೆ ನಮ್ಮ ಜಾತ್ಯತೀತ ಜನತಾದಳ ಬದ್ಧವಾಗಿದೆ. ಶನಿವಾರ ನಮ್ಮ ಪಕ್ಷದ ವತಿಯಿಂದ ಬೃಹತ್ ಹೋರಾಟ ನಡೆಸುತ್ತಿದ್ದು, ರಾಜ್ಯ ಸರ್ಕಾರದ ಕಣ್ತೆರೆಸುವ ಕೆಲಸ ಮಾಡುತ್ತೇವೆ ಎಂದರು.

ನಮ್ಮ ಹೋರಾಟದಲ್ಲಿ ಪಕ್ಷಾತೀತವಾಗಿ ಎಲ್ಲ ಜಿಲ್ಲಾ ಜನಪ್ರತಿನಿಧಿಗಳು ಭಾಗಿಯಾಗಿ ನ್ಯಾಯ ದೊರಕಿಸಿಕೊಡಬೇಕು. ಸಂಸದರು ಸಹ ಹೋರಾಟಕ್ಕಿಳಿಯಲಿ. ಶನಿವಾರ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಅತಿ ಹೆಚ್ಚಿನ ರೈತರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಪಕ್ಷದ ಬಿಡುತ್ತೇನೆನ್ನುವುದು ಸುಳ್ಳು : ನಾನು ಜಾತ್ಯತೀತ ಜನತಾದಳವನ್ನು ತ್ಯಜಿಸುತ್ತೇನೆ ಎನ್ನುವುದು ಸುಳ್ಳು. ಇದೆಲ್ಲ ಕೇವಲ ಊಹಾಪೋಹ ಅಷ್ಟೆ. ನಾನು ಜಾ.ದಳದಲ್ಲೇ ಸಕ್ರಿಯವಾಗಿ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಸ್ಪಷ್ಟಪಡಿಸಿದರು.

ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಅವರು ಪಕ್ಷ ಬಿಡುವುದಿಲ್ಲ. ನಾನು ಮತ್ತು ಅವರು ಮೂರು ದಿನ ಕೊಡಗಿನಲ್ಲಿದ್ದೆವು. ಪಕ್ಷ ಬಿಡುವ ಯಾವುದೇ ಬೆಳವಣಿಗೆ ಇಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದು, ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ