ಮಂಡ್ಯ: ಪಕ್ಷದಿಂದ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಸಿದ್ಧತೆಗೆ ಆದೇಶ ಬಂದಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಮಂಡ್ಯದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರವಾರು ಸಭೆ ಮಾಡುತ್ತಾ ಇದ್ದೀವಿ. ಈ ವರ್ಷ ಮಾರ್ಚ್‌ನಿಂದ ಮುಂದಿನ ಮಾರ್ಚ್‌ವರೆಗೆ ಸ್ಥಳೀಯ ಚುನಾವಣೆಗಳು ನಡೆಯುತ್ತವೆ. ಎಲ್ಲಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿ ಮಾಡುತ್ತಾ ಇದ್ದೀವಿ ಎಂದರು.
ಇನ್ನು ಕೆಆರ್‌ಎಸ್ ಡ್ಯಾಂನಲ್ಲಿ ಗೇಟ್ ಓಪನ್ ಆಗಿದ್ದ ವಿಚಾರವಾಗಿ ಮಾತನಾಡಿದ ಅವರು, ಪ್ರತಿ ವರ್ಷ ಡ್ಯಾಂನ್ನು ನಿರ್ವಹಣೆ ಮಾಡಬೇಕು. 80 ಅಡಿಗೆ ಬರುವ ಮುಂಚೆ ನಿರ್ವಹಣೆ ಮಾಡ್ತಾರೆ. ಸದ್ಯ ಡ್ಯಾಂನಲ್ಲಿ 107 ಅಡಿ ನೀರು ಇದೆ. ಇನ್ನೇನು ಮಳೆ ಬರುವ ವಾತಾವರಣ ಸಹ ಇದೆ. ನಿರ್ವಹಣೆ ಮಾಡುವ ಸಂದರ್ಭದಲ್ಲಿ ಒಂದು ಗೇಟ್ ಓಪನ್ ಆಗಿತ್ತು. ಬೆಳಗ್ಗೆ 8 ಗಂಟೆಗೆ ಗೇಟ್ ಓಪನ್ ಆಗಿರೋದು ತಿಳಿದಿದೆ. ಇದರಿಂದ ಸ್ವಲ್ಪ ನೀರು ಹೋಗಿದೆ. ಸಂಜೆ 5 ಗಂಟೆ ಒಳಗೆ ತಾಂತ್ರಿಕ ತಂಡ ಈ ಗೇಟ್ ಕ್ಲೋಸ್ ಮಾಡಿದೆ. 600 ರಿಂದ 700 ಕ್ಯೂಸೆಕ್ ನೀರು ಹೋಗಿರಬೇಕು ಅಷ್ಟೇ. ಡ್ಯಾಂ ನಿರ್ಮಾಣ ಮಾಡಿದಾಗಿನಿಂದ ಬೇರೆ ಯಾವ ಕೆಲಸ ಆಗಿಲ್ಲ. ಹೀಗಾಗಿ ಈ ರೀತಿ ಆಗಿದೆ. ತಮಿಳುನಾಡಿಗೆ ನೀರು ಬಿಡಲು ಹೀಗೆ ಮಾಡಿಲ್ಲ. ತಮಿಳುನಾಡಿನವರು ನೀರು ಕೇಳದೇ ಹೇಗೆ ಬಿಡೋಕೆ ಸಾಧ್ಯ. ಕಣ್ತಪ್ಪಿನಿಂದ ಗೇಟ್ ಓಪನ್ ಆಗಿದೆ ಅಷ್ಟೇ. ಅಧಿಕಾರಿಗಳು ಸಮಯ ಪ್ರಜ್ಞೆ ಮೆರೆದು ಅದನ್ನು ಬೇಗ ಸರಿಪಡಿಸಿದ್ದಾರೆ.
ಮಾತನಾಡುವವರು ನೋಡಿಕೊಂಡು ಮಾತಾಡಬೇಕು. ನೂರಾರು ವರ್ಷಗಳು ಆಗಿರೋ ಕಾರಣ ಗೇಟ್‌ಗಳ ರಿವ್ಯೂ ಮಾಡಬೇಕು ಎಂದರು.





