Mysore
20
few clouds

Social Media

ಶುಕ್ರವಾರ, 09 ಜನವರಿ 2026
Light
Dark

ಮದ್ದೂರು ಪೇಟೆ ಬೀದಿಯಲ್ಲಿ ಅಕ್ರಮ ಫುಟ್‌ಪಾತ್ ತೆರವು ಕಾರ್ಯಾಚರಣೆ

ಮದ್ದೂರು: ಪಟ್ಟಣದ ಪೇಟೆ ಬೀದಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಜೆಸಿಬಿ ಸದ್ದು ಮಾಡಿದ್ದು, ಅಕ್ರಮ ಫುಟ್‌ಪಾತ್ ತೆರವು ಕಾರ್ಯಾಚರಣೆ ಮಾಡಲಾಯಿತು.

ಇಂದು ಬೆಳಿಗ್ಗೆಯೇ ಕೊಳ್ಳಿ ವೃತ್ತದಲ್ಲಿ ಕಾರ್ಯಾಚರಣೆ ಆರಂಭಗೊಂಡು, ಪೇಟೆ ಬೀದಿಯಲ್ಲಿದ್ದ ಅಕ್ರಮ ಅಂಗಡಿಗಳು, ಸೀಟುಗಳು ಹಾಗೂ ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಲಾಯಿತು. ಈ ಕಾರ್ಯಾಚರಣೆ ಟಿಬಿ ವೃತ್ತದವರೆಗೆ ಮುಂದುವರಿಯಿತು.

ಮದ್ದೂರು ಪೇಟೆ ಬೀದಿ ಅಗಲೀಕರಣವನ್ನು 80 ಅಡಿವರೆಗೆ ವಿಸ್ತರಿಸುವ ಕುರಿತು ಶಾಸಕ ಕೆ.ಎಂ.ಉದಯ್ ಅವರು ಈಗಾಗಲೇ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದ್ದು, ಶೀಘ್ರದಲ್ಲೇ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ನಗರಸಭೆ, ಪಿಡಬ್ಲ್ಯೂಡಿ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಪೇಟೆ ಬೀದಿಯ ಎರಡೂ ಬದಿಯಲ್ಲಿದ್ದ ಅಕ್ರಮ ಫುಟ್‌ಪಾತ್‌ಗಳನ್ನು ಪೊಲೀಸ್ ಬಂದೋಬಸ್ತ್ ನಡುವೆ ತೆರವುಗೊಳಿಸಲಾಗುತ್ತಿದೆ.

ಈ ವೇಳೆ ಮಾತನಾಡಿದ ನಗರಸಭಾ ಆಯುಕ್ತೆ ರಾಧಿಕಾ ಅವರು, ಹಲವು ವರ್ಷಗಳಿಂದ ಪೇಟೆ ಬೀದಿಯ ಎರಡೂ ಬದಿಗಳಲ್ಲಿ ಅಂಗಡಿದಾರರು ಅಕ್ರಮವಾಗಿ ಸೀಟುಗಳನ್ನು ಹಾಕಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಫುಟ್‌ಪಾತ್ ಮೇಲೆ ತರಕಾರಿ, ಹಣ್ಣು, ವೀಳ್ಯದೆಲೆ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ನಡೆಯುತ್ತಿತ್ತು. ಇದರಿಂದ ಸಾರ್ವಜನಿಕರ ಸಂಚಾರಕ್ಕೆ, ವಿಶೇಷವಾಗಿ ಬೆಳಗಿನ ವೇಳೆಯಲ್ಲಿ ಶಾಲಾ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿತ್ತು ಎಂದರು.

ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು ಒಗ್ಗೂಡಿಸಿಕೊಂಡು ಇಂದು ಬೆಳಿಗ್ಗೆಯೇ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದಷ್ಟು ಬೇಗ ಸಂಪೂರ್ಣ ತೆರವು ಕಾರ್ಯ ಪೂರ್ಣಗೊಳಿಸಲಾಗುವುದು. ಸಾರ್ವಜನಿಕರು, ವ್ಯಾಪಾರಿಗಳು ಮತ್ತು ವರ್ತಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

 

Tags:
error: Content is protected !!