ಮಂಡ್ಯ: ದೀಪಾವಳಿ ಹಬ್ಬದ ಅಂಗವಾಗಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಜಿಲ್ಲೆಯಲ್ಲಿ ಅವಕಾಶ ನೀಡಲಾಗಿದೆ. ಹಸಿರು ಪಟಾಕಿ ಹೊರತು ಪಡಿಸಿ ಬೇರೆ ಪಟಾಕಿ ಮಾರಾಟ ಮಾಡಿದರೆ ಶಿಸ್ತುಬದ್ಧ ಕ್ರಮ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಮಾರಾಟ ಮಾಡಲು ತಾತ್ಕಾಲಿಕ ಪರವಾನಿಗೆ ನೀಡುವ ಸಂಬಂಧ ಆಯೋಜಿಸಲಾಗಿದ್ದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಕ್ಟೋಬರ್ 18 ರಿಂದ 23 ರವರೆಗೆ ಮಾತ್ರ ಪಟಾಕಿ ಮಾರಾಟಗಾರರಿಗೆ ತಾತ್ಕಾಲಿಕ ಪರವಾನಗಿ ನೀಡಲಾಗುವುದು. ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಪಟಾಕಿ ಮಾರಾಟಕ್ಕೆ ಸ್ಥಳ ನಿಗದಿ ಮಾಡಲಿದೆ. ನಿಗಧಿಪಡಿಸಿದ ಸ್ಥಳದಲ್ಲಿ ಮಾತ್ರ ಪಟಾಕಿ ಅಂಗಡಿಗಳನ್ನು ತೆರೆಯಬೇಕು ಎಂದು ಹೇಳಿದರು.
ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು, ತಹಶೀಲ್ದಾರ್ ನೇತೃತ್ವದ ಸಮಿತಿಯು ಆಯಾ ತಾಲೂಕು ಮಟ್ಟದಲ್ಲಿ ಪಟಾಕಿ ಮಾರಾಟಗಾರರಿಗೆ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವ ಸಂದರ್ಭದಲ್ಲಿ ಸೂಕ್ತ ಜಾಗವನ್ನು ಗುರುತಿಸಿ ಅನುಮತಿ ನೀಡಬೇಕು, ಅನುಮತಿ ನೀಡುವ ಸಂದರ್ಭದಲ್ಲಿ ಗುರುತಿಸಲಾದ ಜಾಗದ ಸುತ್ತ ಮುತ್ತಲು ದೇವಸ್ಥಾನ, ಆಸ್ಪತ್ರೆ, ಮನೆಗಳು ಇಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳಿ ಎಂದು ಎಚ್ಚರಿಸಿದರು.
ಪಟಾಕಿ ಮಾರಾಟ ಮಾಡಲು ತಾತ್ಕಾಲಿಕವಾಗಿ ಪರವಾನಿಗೆ ನೀಡುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ವೀಕೃತವಾಗುವ ಅರ್ಜಿಗಳನ್ನು ಆಯಾ ತಾಲೂಕು ಕಚೇರಿಗಳಿಗೆ ಕಳುಹಿಸಲಾಗುವುದು, ಪಟಾಕಿ ಮಾರಾಟ ಮಾಡಲು ನಿಗದಿಪಡಿಸುವ ಜಾಗವೂ ಸರ್ಕಾರಿ ಒಡೆತನಕ್ಕೆ ಸೇರಿದ್ದರೆ ಸಂಬಂಧ ಪಟ್ಟ ಇಲಾಖೆಯ ಬಳಿ ಎನ್‌ಓಸಿ ಪಡೆಯಬೇಕು. ಖಾಸಗಿ ಜಾಗ ಆಗಿದ್ದರೆ ಅ ಜಾಗದ ಮಾಲೀಕರ ಬಳಿ ಎನ್.ಓ.ಸಿ ಪಡೆಯಬೇಕು ಎಂದರು.
ಇದನ್ನು ಓದಿ : ಕಾಂಗ್ರೆಸ್ ಕಾರ್ಯಕರ್ತರಿಗೆ ದಸರಾ-ದೀಪಾವಳಿ ಕೊಡುಗೆ : 38 ನಿಗಮ-ಮಂಡಳಿಗಳಿಗೆ ನೇಮಕ
ಪಟಾಕಿ ಮಳಿಗೆಗಳನ್ನು ತೆರೆಯಲು ಲೇಔಟ್ ಸಿದ್ಧಪಡಿಸಿ, ಒಂದು ಮಳಿಗೆಯಿಂದ ಇನ್ನೊಂದು ಮಳಿಗೆ 10×10 ಅಡಿ ದೂರ ಇರತಕ್ಕದ್ದು, ಪ್ರತಿ ಮಳಿಗೆ 9 ಲೀಟರ್ ಸಾಮರ್ಥ್ಯದ ವಾಟರ್ ಪ್ರೇಜರ್ ಮಾದರಿ ಅಗ್ನಿನಂದಕ ಹಾಗೂ ಎರಡು ಬಕೆಟ್ ಗಳಲ್ಲಿ ನೀರನ್ನು ಮತ್ತು ಮರಳನ್ನು ಇಟ್ಟಿರಬೇಕು. ಪ್ರತಿ ಮಳಿಗೆ ಪಕ್ಕದಲ್ಲಿ 2 ಡ್ರಂಗಳ ಕನಿಷ್ಠ 1000 ಲೀಟರ್ ನೀರನ್ನು ಕಡ್ಡಾಯವಾಗಿ ಶೇಖರಿಸಿಡಬೇಕು. ವಾಹನಗಳನ್ನು ಪಾರ್ಕಿಂಗ್ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ಮಳಿಗೆಗಳಿಂದ ಕನಿಷ್ಠ 50 ಮೀಟರ್ ದೂರದವರೆಗೂ ಧೂಮಪಾನ, ಕುಕ್ಕಿಂಗ್ (ಅಡುಗೆ) ವ್ಯವಸ್ಥೆ, ಕಿಡಿಹೊತ್ತಿಸುವುದು, ಪಟಾಕಿ ಸಿಡಿಸುವುದನ್ನು ನಿಷೇಧ ಎಂಬ ಸೂಚನಾ ಫಲಕ ಅಳವಡಿಸಬೇಕು, ಸದರಿ ಪ್ರದೇಶದಲ್ಲಿ ತಿಳಿಸಲಾದ ಯಾವುದೇ ವ್ಯಕ್ತಿ ನಿಯಮ ಉಲ್ಲಂಘಿಸಿದರೆ ನಿಯಮಾನುಸಾರ ಕ್ರಮ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ, ತಾತ್ಕಾಲಿಕ ಪರವಾನಿಗೆ ಪಡೆದ ಪಟಾಕಿ ಮಾಲೀಕರು ನೇರವಾಗಿ ಗ್ರಾಹಕರಿಗೆ ಪಟಾಕಿಗಳನ್ನು ಮಾರಾಟ ಮಾಡಬೇಕು, ಯಾವುದೇ ಕಾರಣಕ್ಕೂ ಸಣ್ಣ ಪುಟ್ಟ ಅಂಗಡಿಗಳಿಗೆ ಪಟಾಕಿಗಳನ್ನು ರಫ್ತು ಮಾಡಬಾರದು, ಡಿ.ವೈ.ಎಸ್.ಪಿ ಗಳು ತಮ್ಮ ವ್ಯಾಪ್ತಿಗೆ ಬರುವ ಪಟಾಕಿ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪಟಾಕಿ ಮಾರಾಟಗಾರರು ಪಟಾಕಿಗಳನ್ನು ಅವರ ಮನೆಗಳಲ್ಲಿ ಶೇಖರಿಸಿರಕೂಡದು ಎಂದು ಹೇಳಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಶೀಲ್ದಾರ್ ವಿಶ್ವನಾಥ್,ಪಾಂಡವಪುರ ತಹಶೀಲ್ದಾರ್ ಸಂತೋಷ್, ನಗರಾಭಿವೃದ್ಧಿ ಕೋಶಾಧಿಕಾರಿ ನರಸಿಂಹಮೂರ್ತಿ, ನಗರಸಭೆ ಪೌರಾಯುಕ್ತೆ ಪಂಪಶ್ರೀ, ಡಿ.ವೈ.ಎಸ್.ಪಿ ಲಕ್ಷ್ಮಿ ನಾರಾಯಣ್, ಜಿಲ್ಲಾ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಗೀತಾ, ಪಟಾಕಿ ಮಾರಾಟದಾರರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





