ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ನಿಯೋಜನೆಗೊಂಡಿರುವ ಸೂಕ್ಷ್ಮವೀಕ್ಷಕರು ಮತಗಟ್ಟೆಯ ಹೊರಗೆ ಹಾಗೂ ಒಳಗೆ ನಡೆಯುವ ಎಲ್ಲಾ ಪ್ರಕ್ರಿಯೆಗಳನ್ನು ವೀಕ್ಷಿಸಿ ವರದಿ ನೀಡಬೇಕು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ನೀರಜ್ ಕುಮಾರ್ ಸೂಚಿಸಿದರು.
ಇಂದು ನಗರದ ಡಾ: ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಸೂಕ್ಷ್ಮವೀಕ್ಷಕರುಗಳಿಗೆ ಏರ್ಪಡಿಸಲಾಗಿದ್ದ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದರು. ಸೂಕ್ಷ್ಮ ವೀಕ್ಷಕರನ್ನು ಚುನಾವಣಾ ಆಯೋಗದಿಂದ ನೇಮಕ ಮಾಡಲಾಗಿರುತ್ತದೆ. ಪ್ರತಿಯೊಂದು ಪ್ರಕ್ರಿಯೆಯನ್ನು ಸಿ.ಸಿ.ಟಿ.ವಿ ರೀತ್ಯ ದಾಖಲು ಮಾಡಿಕೊಂಡು ಸಾಮಾನ್ಯ ವೀಕ್ಷಕರಿಗೆ ಮಾತ್ರ ವರದಿ ಮಾಡಬೇಕು ಎಂದು ಮಾಹಿತಿ ನೀಡಿದರು.
ಮತದಾನ ಪ್ರಾರಂಭವಾಗುವ 90 ನಿಮಿಷಗಳ ಮೊದಲು ತಮಗೆ ನಿಯೋಜಿಸಿರುವ ಮತಗಟ್ಟೆಯಲ್ಲಿ ವರದಿ ಮಾಡಿಕೊಳ್ಳಬೇಕು. ಯಾವುದೇ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಲ್ಲಿ ಅಣುಕು ಮತದಾನ ನಡೆಸಿ ವರದಿ ನೀಡಬೇಕು ಎಂದರು.
ಸೂಕ್ಷ್ಮ ವೀಕ್ಷಕರು ಚುನಾವಣಾ ಆಯೋಗದ ಕಣ್ಣು ಮತ್ತು ಕಿವಿಗಳ ರೀತಿ ಕಾರ್ಯನಿರ್ವಹಿಸಿ ಯಾವುದೇ ಅಹಿತಕರ ಘಟನೆ ಕಂಡುಬಂದಲ್ಲಿ ತಕ್ಷಣ ವರದಿ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಡಾ. ಕುಮಾರ ಮಾತನಾಡಿ ಸೂಕ್ಷ್ಮ ವೀಕ್ಷಕರು ಮತಗಟ್ಟೆಯ 100 ರಿಂದ 200 ಮೀಟರ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕ್ರಮಗಳ ಬಗ್ಗೆ ನಿಗಾ ವಹಿಸಬೇಕು. ಮತಗಟ್ಟೆಯ ಒಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವಂತಿಲ್ಲ. ಮತದಾನದ ಗೌಪ್ಯತೆ ಕಾಪಡದೇ ಉಲ್ಲಂಘನೆ ಮಾಡುವುದು ಕಂಡುಬಂದಲ್ಲಿ ಆರ್.ಪಿ. ಆ್ಯಕ್ಟ್ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಗೆ ನೀಡಿದರು.
ತರಬೇತಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಹೆಚ್ ಎಲ್ ನಾಗರಾಜು, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್ ಹೆಚ್, ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.