Mysore
24
broken clouds

Social Media

ಶನಿವಾರ, 24 ಜನವರಿ 2026
Light
Dark

ಮೋದಿಯಿಂದ ಉನ್ನತ ರಾಷ್ಟ್ರದ ಗುರಿ ; ಪ್ರತಿಯೊಬ್ಬ ನಾಗರಿಕರು ಸಹಕಾರ ನೀಡಲು ಸಂಸದ ಯದುವೀರ್ ಮನವಿ

ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತದ ಮೂಲಕ ದೇಶವನ್ನು ಒಂದು ಉನ್ನತ ರಾಷ್ಟ್ರವನ್ನಾಗಿ ರೂಪಿಸುವ ಗುರಿ ಹೊಂದಿದ್ದಾರೆ. ಇದಕ್ಕೆ ಪ್ರತಿಯೊಬ್ಬ ನಾಗರಿಕರೂ ಸಹಕಾರ ನೀಡಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದರು.

ನಗರದ ನೂರಡಿ ರಸ್ತೆಯಲ್ಲಿ ನೂತನವಾಗಿ ಸ್ಥಾಪಿಸಿರುವ ಗೋಲ್ಡ್ ಜಿಮ್ ಉದ್ಘಾಟಿಸಿ ಮಾತನಾಡಿದ ಅವರು, ವಿಕಸಿತ ಭಾರತ ದೂರದೃಷ್ಟಿಯ ಕಲ್ಪನೆಯಾಗಿದೆ. ಇದು ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ಪ್ರಗತಿಯನ್ನು ಕೇಂದ್ರೀಕರಿಸುತ್ತದೆ. ಇದನ್ನು ಕೇವಲ ಕೇಂದ್ರ ಸರ್ಕಾರದಿಂದ ಮಾತ್ರ ಸಾಽಸಲಾಗದು, ಪ್ರತಿಯೊಬ್ಬ ನಾಗರಿಕರೂ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಭಾರತ ಕೃಷಿ, ಶಿಕ್ಷಣ, ಆರೋಗ್ಯ, ಉದ್ಯೋಗ, ನವೀಕರಿಸಬಹುದಾದ ಇಂಧನ ಮತ್ತು ಪರಿಸರ ಸಂರಕ್ಷಣೆಯಂತಹ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಬೇಕಾಗಿದೆ. ಜತೆಗೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹ ಜಿಮ್‌ಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.

ಇದನ್ನು ಓದಿ :  ಪತ್ರಕರ್ತರ ಉಚಿತ ಬಸ್‌ ಪಾಸ್‌ಗೆ ಅರ್ಜಿ ಆಹ್ವಾನ

ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ, ಸುಸ್ಥಿರ ಅಭಿವೃದ್ಧಿ, ರಾಸಾಯನಿಕ ಮುಕ್ತ ವಾತಾವರಣ, ಭ್ರಷ್ಟಾಚಾರ ರಹಿತ ಬದುಕು ಮತ್ತು ಉತ್ತಮ ಆಡಳಿತ, ಯಾವುದೇ ಭಾಷೆ, ಜಾತಿ ಅಥವಾ ಧರ್ಮದ ಆಧಾರದ ಮೇಲೆ ಸಂಘರ್ಷವಿಲ್ಲದೆ ಐಕ್ಯರಾಗುವಂತಹ ಸ್ವಾಸ್ತ್ಯ ಸಮಾಜವನ್ನು ನಿರ್ಮಾಣ ಮಾಡಬೇಕಿದೆ ಎಂದು ಹೇಳಿದರು.

ಆರೋಗ್ಯಕರ ಸಮಾಜ ಸೃಷ್ಟಿಸುವುದಕ್ಕೆ ಕೇಂದ್ರದಿಂದ ಅತ್ಯಂತ ಒಳ್ಳೆಯ ಕೆಲಸಗಳು ಆಗುತ್ತಿವೆ. ಇದು ಎಷ್ಟೇ ಆದರೂ ಸರ್ಕಾರದಿಂದ ಸಹಾಯ ಬಂದರೂ, ನಾಗರಿಕರ ಹೊಣೆಗಾರಿಕೆಯೂ ಮುಖ್ಯವಾಗುತ್ತದೆ. ಸ್ವಯಂ ಆಸಕ್ತಿಯಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕೆಂಬ ಮನೋಭಾವನೆಯು ಜನರಲ್ಲಿ ಬರಬೇಕು. ನನ್ನ ದೇಹಾರೋಗ್ಯವನ್ನು ನಾನೇ ಕಸರತ್ತು ಮಾಡುವ ಮೂಲಕ ಕಾಪಾಡಿಕೊಳ್ಳುತ್ತೇವೆಂಬ ಇಚ್ಚೆ ಬಂದಲ್ಲಿ ಮಾತ್ರ ಆರೋಗ್ಯಯುತ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಮಂಡ್ಯ ಮತ್ತು ಅರಮನೆಗೆ ಒಂದು ರೀತಿಯ ನಿಕಟ ಹಾಗೂ ಭಾವನಾತ್ಮಕ ಸಂಬಂಧ ಇದೆ. ಹಿಂದಿನಿಂದಲೂ ಒಂದು ಬಾಂಧವ್ಯ ವೃದ್ಧಿಯಾಗಿದೆ. ಆ ಕಾರಣಕ್ಕೆ ಮಂಡ್ಯ ಜಿಲ್ಲೆಯ ಬೆಳವಣಿಗೆಗೆ ಮೈಸೂರು ಅರಸರ ಕೊಡುಗೆಯೂ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒಳ್ಳೆಯ ರೀತಿಯಲ್ಲಿ ಹೋರಾಟ ಮಾಡುವುದು ಅಗತ್ಯ. ಇನ್ನೂ ಒಳ್ಳೆಯ ಕೆಲಸ ಮಾಡುವ ನಿಟ್ಟಿನಲ್ಲಿ ನಮ್ಮ ಸಹಕಾರವೂ ಇದ್ದೇ ಇರುತ್ತದೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದವೂ ಇರಲಿ ಎಂದು ಹೇಳಿದರು.

ಬಿಜೆಪಿ ಮುಖಂಡ ಇಂಡುವಾಳು ಎಸ್. ಸಚ್ಚಿದಾನಂದ, ಜಿಮ್ ಮಾಲೀಕರಾದ ಪ್ರಭಾವತಿ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಮಂಜು, ಮುಖಂಡರಾದ ಪ್ರಸನ್ನ, ಲಂಕೇಶ್, ಸಿ.ಟಿ. ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.

Tags:
error: Content is protected !!