ಮಂಡ್ಯ : ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಕೆಟ್ಟ ಸಂದೇಶ ಹಾಕದಂತೆ ನಟ ದರ್ಶನ್ ತಮ್ಮ ಅಭಿಮಾನಿಗಳಿಗೆ ಸಲಹೆ ಕೊಟ್ಟರೆ ಒಳ್ಳೆಯದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ದರ್ಶನ್ ಅಭಿಮಾನಿಗಳು ನಟಿ ರಮ್ಯಾಗೆ ಕೆಟ್ಟ ಸಂದೇಶ ಕಳುಹಿಸಿರುವ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ತಪ್ಪಿತಸ್ಥರು ಎಂದು ಗೊತ್ತಾದರೆ ಶಿಕ್ಷೆ ಆಗುತ್ತದೆ. ಯಾರೂ ಕೂಡ ತಪ್ಪಿಸಿಕೊಳ್ಳಲು ಆಗಲ್ಲ. ನ್ಯಾಯಾಲಯದ ಮುಂದೆ ಯಾರೂ ದೊಡ್ಡವರಲ್ಲ. ಸುಮ್ಮನೆ ಮಾತನಾಡಿದರೆ ವ್ಯರ್ಥ ಎಂದರು.
ಕಮೆಂಟ್ ಮಾಡಿ ಅವರ ಬಗ್ಗೆ ಇವರ ಬಗ್ಗೆ ಬೈದುಕೊಂಡು ಇದ್ದರೆ ಏನೂ ಆಗಲ್ಲ. ನ್ಯಾಯಾಲಯದಲ್ಲಿ ಏನು ತೀರ್ಪು ಬರುತ್ತದೆ ಕಾದು ನೋಡಬೇಕು. ಅನಗತ್ಯ ಕಮೆಂಟ್‌ಗಳನ್ನು ಮಾಡುವುದು ಬೇಡ. ಈ ಬಗ್ಗೆ ಅಭಿಮಾನಿಗಳಿಗೆ ಹೇಳಲು ದರ್ಶನ್ ಜತೆ ಮಾತನಾಡುತ್ತೇನೆ ಎಂದು ತಿಳಿಸಿದರು.
ದರ್ಶನ್ ತಮ್ಮ ಅಭಿಮಾನಿಗಳಿಗೆ ಸಲಹೆ ಕೊಟ್ಟರೆ ಒಳ್ಳೆಯದು. ಸಲಹೆ ಕೊಡಲಿಲ್ಲ ಅಂದರೆ ಹೀಗೇ ಜಿದ್ದಾ ಜಿದ್ದಿ ನಡೆಯುತ್ತದೆ. ಎಲ್ಲ ವಿಚಾರದಲ್ಲೂ ಪಾಸಿಟಿವ್, ನೆಗೆಟಿವ್ ಇರುತ್ತದೆ. ಸಾಮಾಜಿಕ ಜಾಲತಾಣವನ್ನು ಪಾಸಿಟಿವ್ ಆಗಿ ಬಳಕೆ ಮಾಡಿಕೊಳ್ಳಬೇಕು. ಸರ್ಕಾರವೂ ಕೂಡ ಪರಿಣಾಮಕಾರಿಯಾಗಿ ಬಳಕೆ ಮಾಡುವುದರ ಬಗ್ಗೆ ಹೇಳಬೇಕಿದೆ ಎಂದರು.





