ಮಂಡ್ಯ: ಯಾರು ಇಲ್ಲದ ವೇಳೆ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ದುಷ್ಕರ್ಮಿಗಳ ಅಮಾನವೀಯ ಕೃತ್ಯ ಪಾಂಡವಪುರ ತಾಲ್ಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಪೂಜಾರಿ ಕೃಷ್ಣ ಎಂಬುವರಿಗೆ ಸೇರಿದ ಮನೆಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಮನೆಯವರು ಜಮೀನಿಗೆ ತೆರಳಿದ್ದ ಕಾರಣ ಯಾರೂ ಮನೆಯಲ್ಲಿರಲಿಲ್ಲ. ಮನೆಗೆ ಹೊತ್ತಿ ಉರಿದ ಬೆಂಕಿಯಿಂದ ಮನೆಯೊಳಗಿದ್ದ ನಗದು ಹಣ, ಚಿನ್ನಾಭರಣಗಳು, ಬಟ್ಟೆಗಳು ಹಾಗೂ ಪೀಠೋಪಕರಣಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಘಟನೆಯಿಂದ ಮನೆ ಸಂಪೂರ್ಣ ಹಾನಿಗೊಳಗಾಗಿದ್ದು, ಸರ್ವಸ್ವ ಕಳೆದುಕೊಂಡ ಕುಟುಂಬ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ದುಷ್ಕರ್ಮಿಗಳ ಕೃತ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕುಟುಂಬ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.





