Mysore
30
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಮೇಲುಕೋಟೆ | ಉಪರಾಷ್ಟ್ರಪತಿ ಭೇಟಿ ಹಿನ್ನೆಲೆ : ಹೆಲಿಕ್ಯಾಪ್ಟರ್‌ ಲ್ಯಾಂಡಿಂಗ್‌ ಪರಿಶೀಲನೆ

ಮಂಡ್ಯ : ಅ.9ರ ಭಾನುವಾರ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಮೇಲುಕೋಟೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೇಲುಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಮೈದಾನದಲ್ಲಿ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ಹಾಗೂ ಟೇಕಾಫ್ ಮಾಡುವ ಮೂಲಕ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಭದ್ರತಾ ಪರಿಶೀಲನೆ ನಡೆಸಿದರು.

ಮೇಲುಕೋಟೆಯ ಹೆಲಿಕಾಪ್ಟರ್ ಲ್ಯಾಂಡಿಂಗ್ ಸ್ಥಳಕ್ಕೆ ಭೇಟಿ ನೀಡಿ, ಭಾರತೀಯ ವಾಯುಸೇನೆಯ ಅಧಿಕಾರಿಗಳ ಜತೆಗೂಡಿ ಹೆಲಿಕ್ಯಾಪ್ಟರ್ ಟೇಕಾಫ್ ಮಾಡುವ ಮೂಲಕ ಪರೀಕ್ಷೆ ನಡೆಸಿ ಸುರಕ್ಷತೆಯ ಕುರಿತಾಗಿ ಪರಿಶೀಲನೆ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ, ಉಪರಾಷ್ಟ್ರಪತಿಯವರು ಭಾರತೀಯ ವಾಯು ಸೇವೆಯ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಮೇಲುಕೋಟೆಗೆ ಆಗಮಿಸಿ ಇದೇ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ :-ಮಳವಳ್ಳಿ | ಲಂಚ ; ಲೋಕಾ ಬಲೆಗೆ ಪೊಲೀಸ್‌ ಹೆಡ್ ಕಾನ್‌ಸ್ಟೆಬಲ್‌

ಮೇಲುಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಮೈದಾನದಲ್ಲಿ ಉಪರಾಷ್ಟ್ರಪತಿಗಳ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ಮಾಡಲು ಮಾತ್ರ ಸ್ಥಳವಕಾಶವಿದ್ದು, ಬೆಂಗಾವಲುಪಡೆಯ ಸೇನಾ ಹೆಲಿಕ್ಯಾಪ್ಟರ್‌ಗಳನ್ನು ಲ್ಯಾಂಡಿಂಗ್ ಮಾಡಲು ಎಸ್.ಇ.ಟಿ. ಪಾಲಿಟೆಕ್ನಿಕ್ ಮೈದಾನದಲ್ಲಿ ಅವಕಾಶ ಮಾಡಲಾಗಿದೆ ಎಂದರು.

ಶ್ರೀಯೋಗನರಸಿಂಹಸ್ವಾಮಿ ಬೆಟ್ಟದ ಹಿನ್ನೆಲೆಯಲ್ಲಿ ಹೆಲಿಕ್ಯಾಪ್ಟರ್ ಹಾರಾಟ ಮಾಡುತ್ತಿರುವ ಮತ್ತು ಟೇಕಾಪ್ ಆಗುವುದನ್ನು ನೂರಾರು ಸಂಖ್ಯೆಯಲ್ಲಿ ಸೇರಿದ ನಾಗರಿಕರು ಮತ್ತು ವಿದ್ಯಾರ್ಥಿಗಳು ವೀಕ್ಷಿಸಿ ಆನಂದಿಸಿದರು.

ಭಾರೀ ಭದ್ರತೆ:
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ನ.9 ರಂದು ಹೆಲಿಪ್ಯಾಡ್‌ನಲ್ಲಿ ಹಾಜರಿದ್ದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಸ್ವಾಗತಿಸಿ ಚೆಲುವನಾರಾಯಣಸ್ವಾಮಿ ದೇವಾಲಯದ ದರ್ಶನ ಪಡೆಯುವವರೆಗೂ ಇರಲಿದ್ದಾರೆ. ಉಪರಾಷ್ಟ್ರಪತಿಯ ಭೇಟಿಯ ಹಿನ್ನೆಲೆಯಲ್ಲಿ ಮೇಲುಕೋಟೆಯಲ್ಲಿ ಭಾರೀ ಭದ್ರತೆ ನಿಯೋಜಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ವಾಯುಪಡೆಯ ಅಧಿಕಾರಿಗಳು ಹೆಲಿಕ್ಯಾಪ್ಟರ್ ಚಲನವಲನದ ಹಾಗೂ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.
ಉಪವಿಭಾಗಾಧಿಕಾರಿ ಡಾ.ಶ್ರೀನಿವಾಸ್, ತಹಸಿಲ್ದಾರ್ ಬಸವರೆಡ್ಡಪ್ಪ ರೋಣದ, ಮುಜರಾಯಿ ತಹಸಿಲ್ದಾರ್ ತಮ್ಮೇಗೌಡ, ಉಪತಹಸಿಲ್ದಾರ್ ರಾಜೇಶ್, ಗ್ರಾಮಾಧಿಕಾರಿ ರಮೇಶ್, ದೇವಾಲಯದ ಇಒ ಶೀಲಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಹರಿಧರ್, ಉಪಾಧ್ಯಕ್ಷ ಜಿ.ಕೆ.ಕುಮಾರ್, ಅಧಿಕಾರಿಗಳು ಹಾಜರಿದ್ದರು.

Tags:
error: Content is protected !!