ಮಂಡ್ಯ: ಜಿಲ್ಲೆಗೆ ಒದಗಿರುವ ವಿಶ್ವವಿದ್ಯಾಲಯವನ್ನು ಮಾಜಿ ಶಾಸಕ ಮರಿತಿಬ್ಬೇಗೌಡ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಮೈಸೂರಿ ವಿವಿಗೆ ವಿಲೀನ ಮಾಡಲು ಒಲವು ತೋರಿದ್ದು, ಉಳಿಕೊಳ್ಳುವ ಬದ್ದತೆ ಇಲ್ಲವಾಗಿದೆ ಎಂದು ಮಂಡ್ಯ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ಬೇಕ್ರಿ ರಮೇಶ್ ಖಂಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಚ್ಚುವ ಆತಂಕ ಬೇಡ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದರೂ, ಮಾಜಿ ಶಾಸಕ ಮರಿತಿಬ್ಬೇಗೌಡ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿಲೀನಕ್ಕೆ ಮುಂದಾಗಿದ್ದಾರೆ ಎಂದರು.
ಬಿಜೆಪಿ ಸರ್ಕಾರದಲ್ಲಿ ವಿವಿ ಸ್ಥಾಪನೆ ಮಾಡಿದಾಗ ಧ್ವನಿ ಎತ್ತದ ಇವರು ವಿಲೀನಕ್ಕೆ ಮಾತ್ರ ತಮ್ಮ ದನಿಗೂಡಿಸುತ್ತಿದ್ದಾರೆ. ಮಂಡಯ ಕ್ಷೇತ್ರ ಶಾಸಕ ರವಿಕುಮಾರ್ ಗಣಿಗ ಅವರು ಮಾತ್ರ ವಿಲೀನಕ್ಕೆ ವಿರೋಧದ ಧ್ವನಿ ಎತ್ತುವ ಮೂಲಕ ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಮೈಸೂರು, ಧಾರವಾಡ, ಬೆಂಗಳೂರು, ಮಂಗಳೂರು ವಿವಿಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ವೇತನ ನೀಡಲು ಕಷ್ಟ ಪಡುತ್ತಿವೆ. ಕೇಂದ್ರ ಸರ್ಕಾರ ಸಹಾಯಕ್ಕೆ ಬರುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಒತ್ತಾಯಿಸಿದ್ದು, ಕಷ್ಟದಲ್ಲಿದೆ ಎಂದು ಎಲ್ಲ ವಿಶ್ವವಿದ್ಯಾಲಯಗಳನ್ನು ಮುಚ್ಚುವುದೇ ಪರಿಹಾರವೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.
ಭಾರತೀಯ ಕಿಸಾನ್ ಸಂಘದ ಪ್ರಾಂತ್ಯ ಅಧ್ಯಕ್ಷ ರಮೇಶ್‌ರಾಜು ಮಾತನಾಡಿ, ರಾಜ್ಯ ಸರ್ಕಾರ ರೈತರಿಗೆ ನೇರವಾಗಿ ತಲುಪುತ್ತಿದ್ದ ಕೃಷಿ ಸಮ್ಮಾನ್ ಯೋಜನೆ ನಿಲ್ಲಿಸಿದ್ದಾರೆ. ಹಾಲಿನ ದರ ಕಡಿತಗೊಳಿಸಿದ್ದಾರೆ. ಇದೀಗ ರೈತರ ಮಕ್ಕಳ ವಿದ್ಯಾಭ್ಯಾಸವನ್ನೂ ಕಸಿಯುವ ಕೆಲಸವಾಗುತ್ತಿದೆ. ಆರ್ಥಿಕ ಸಂಕಷ್ಟವಿದೆ ಎಂದು ವಿವಿ ವಿಲೀನಕ್ಕೆ ಮುಂದಾದ ಸರ್ಕಾರ ಸಾಲದಲ್ಲಿದೆ ಎಂದು ಸರ್ಕಾರ ನಡೆಸುವುದನ್ನು ನಿಲ್ಲಿಸುವರೇ ಎಂದು ಕುಟುಕಿದರು.
ಗೋಷ್ಠಿಯಲ್ಲಿ ಹೆಮ್ಮಿಗೆ ಚಂದ್ರಶೇಖರ್, ಅಪ್ಪಾಜಿಗೌಡ, ಅಚ್ಯುತ್, ಆರಾಧ್ಯ ಇದ್ದರು.