Mysore
29
scattered clouds

Social Media

ಶನಿವಾರ, 02 ನವೆಂಬರ್ 2024
Light
Dark

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ ನಾಳೆ, ನಾಡಿದ್ದು 2 ದಿನಗಳ ಬೃಹತ್ ಉದ್ಯೋಗ ಮೇಳ

ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು ಹಾಗೂ ಕ್ಷೇತ್ರದ ಸಂಸದರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ಸುಮಾರು 150ಕ್ಕೂ ಹೆಚ್ಚು ಉದ್ಯೋಗದಾತ ಕಂಪನಿಗಳು ಭಾಗಿಯಾಗಲಿವೆ.

ಈ ಬಗ್ಗೆ ಸ್ವತಃ ಕೇಂದ್ರ ಸಚಿವರೇ ಮಾಹಿತಿ ನೀಡಿದ್ದು; ದೇಶದ ಉದ್ದಗಲಕ್ಕೂ ಇರುವ 150ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳಕ್ಕೆ ಬರಲಿದ್ದು, ಈ ಭಾಗದ ಮೂರು ಸಾವಿರಕ್ಕೂ ಹೆಚ್ಚು ನಿರುದ್ಯೋಗಿ ಯುವ ಜನರಿಗೆ ಉದ್ಯೋಗ ಕೊಡಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ಮಂಡ್ಯ ಟೂ ಇಂಡಿಯಾ ಎನ್ನುವ ಘೋಷವಾಕ್ಯದೊಂದಿಗೆ ಉದ್ಯೋಗ ಮೇಳ ನಡೆಯುತ್ತಿದ್ದು, ಮಂಡ್ಯದ ಇತಿಹಾಸದಲ್ಲಿಯೇ ಇದೊಂದು ಮೈಲುಗಲ್ಲು ಆಗಲಿದೆ. ರೈತಾಪಿ ಜನರ ಮಕ್ಕಳಿಗೆ ಉದ್ಯೋಗ ಕಲ್ಪಿಸಬೇಕು ಎನ್ನುವುದು ನನ್ನ ಮಹದಾಸೆ ಆಗಿದ್ದು, ಈ ಮೂಲಕ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ನಾಳೆ ಹಾಗೂ ನಾಡಿದ್ದು (ಅಕ್ಟೋಬರ್ 18-19) ಮಂಡ್ಯ ನಗರದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಆಸಕ್ತ ಯುವಜನರು ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವರು ಮನವಿ ಮಾಡಿದ್ದಾರೆ.

ಪ್ರತಿದಿನವೂ ನನ್ನ ಮನೆಗೆ ಬರುವ ಅಸಂಖ್ಯಾತ ನಿರುದ್ಯೋಗಿ ಯುವ ಜನರು ಉದ್ಯೋಗ ಕೊಡಿಸಿ ಎಂದು ಕೇಳುತ್ತಾರೆ. ಅವರ ತಂದೆತಾಯಿ ಮಕ್ಕಳ ಭವಿಷ್ಯಕ್ಕಾಗಿ ಕನಸು ಕಟ್ಟಿಕೊಂಡಿದ್ದಾರೆ. ನಿತ್ಯವೂ ನೂರಾರು ಜನರು ನನ್ನ ಮನೆಯ ಬಳಿಗೆ ಬಂದಾಗ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಆದರೆ, ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಉದ್ಯೋಗ ಮೇಳದ ಮೂಲಕ ಸಾವಿರಾರು ಸಂಖ್ಯೆಯಷ್ಟು ಯುವ ಜನರಿಗೆ ಕೆಲಸ ಸಿಗಲಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಪ್ರತಿಭಾನ್ವಿತ ಯುವ ಜನರಿಗೆ ಕೊರತೆ ಇಲ್ಲ. ಉತ್ತಮ ವಿದ್ಯಾ ಸಂಸ್ಥೆಗಳು ಇದ್ದು, ಪ್ರತಿವರ್ಷ ಸಾಕಷ್ಟು ಯುವಜನರು ಉತ್ತೀರ್ಣರಾಗಿ ಕಾಲೇಜುಗಳಿಂದ ಹೊರಗೆ ಬರುತ್ತಿದ್ದಾರೆ. ಇವರಿಗೆ ಆದಷ್ಟು ಉದ್ಯೋಗಾವಕಾಶ ಕಲ್ಪಿಸಬೇಕು ಎನ್ನುವುದು ನನ್ನ ಸಂಕಲ್ಪವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಮೇಕಾನ್, ಭಾರತೀಯ ಉಕ್ಕು ಪ್ರಾಧಿಕಾರ (SAIL), ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (NMDC), ಲೈಲೋಡ್ಸ್ ಮೆಟಲ್ಸ್, ಭಾರತ್ ಹೆವಿ ಎಲೆಕ್ಟ್ರಿಕಲ್ (BHEL), ಜಿಂದಾಲ್ ಸ್ಟೀಲ್ ಸೇರಿದಂತೆ 150ಕ್ಕೂ ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ನೇರ ನೇಮಕಾತಿ ಮಾಡಿಕೊಳ್ಳುತ್ತಿವೆ. ದೇಶಾದ್ಯಂತ ಉದ್ಯೋಗ ಅವಕಾಶಗಳು ಲಭ್ಯ ಇದ್ದು, ಈ ಅವಕಾಶವನ್ನು ಯುವ ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವರು ಕೋರಿದ್ದಾರೆ.

ನನ್ನ ಸಚಿವಾಲಯದ ಉನ್ನತ ಅಧಿಕಾರಿಗಳು, ಮಂಡ್ಯ ಜಿಲ್ಲೆಯ ಉನ್ನತ ಹಾಗೂ ಎಲ್ಲಾ ಶ್ರೇಣಿಯ ಅಧಿಕಾರಿಗಳು ಉದ್ಯೋಗ ಮೇಳ ಯಶಸ್ಸಿಗೆ ಕೆಲಸ ಮಾಡುತ್ತಿದ್ದು, ಉದ್ಯೋಗ ಅರಸಿ ಬರುವ ಅಭ್ಯರ್ಥಿಗಳಿಗೆ ನಮ್ಮ ಸ್ವಯಂ ಸೇವಕರು, ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಕಂಪನಿಗಳ ಅಧಿಕಾರಿಗಳು ಅಭ್ಯರ್ಥಿಗಳ ವಿವರಗಳನ್ನು ಗಮನಿಸಿದ ನಂತರ ಅವರಿಗೆ ಸೂಕ್ತವಾದ, ಅರ್ಹವಾದ ಹುದ್ದೆಯನ್ನು ನೀಡುವ ವ್ಯವಸ್ಥೆ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

Tags: