Mysore
14
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟವೂ ಇರಲಿ: ಬಾಡೂಟ ಬಳಗದ ಒಕ್ಕೊರಲ ನಿರ್ಧಾರ

ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಡ್ಡಾಯವಾಗಿ ಮಾಂಸದೂಟವನ್ನು ನೀಡಬೇಕು. ಈ ಮೂಲಕ ಮಂಡ್ಯ ನೆಲ ಆಹಾರ ಸಂಸ್ಕೃತಿಯನ್ನು ಗೌರವಿಸುವ ಕೆಲಸ ಮಾಡಬೇಕು. ಜೊತೆಗೆ ವಾಣಿಜ್ಯ ಮಳಿಗೆಗಳಲ್ಲಿ ಮಾಂಸಹಾರಿ ತಿನಿಸುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕೆಂದು ವಿವಿಧ ಸಂಘಟನೆಗಳನ್ನೊಳಗೊಂಡ ಬಾಡೂಟ ಬಳಗ ಒಕ್ಕೊರಲ ತೀರ್ಮಾನಕ್ಕೆ ಬಂದಿವೆ.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನದಲ್ಲಿ ಭಾನುವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನ ಹೊರಡಿಸಿರುವ ನಿಬಂಧನೆಗಳಲ್ಲಿ ಬಾಡೂಟವನ್ನು ನಿಷೇದಿಸಲಾಗಿದೆ ಎಂಬ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಮುಖಂಡರು, ಮಾಂಸಹಾರ ಅಪರಾಧವೆಂಬಂತೆ ಬಿಂಬಿಸಲಾಗಿದೆ. ಈ ಮೂಲಕ ಬಹುಜನರ ಮಾಂಸಹಾರಿ ಸೇವನೆಗೆ ಅಪಮಾನ ಮಾಡಿದಂತಾಗಿದೆ. ಆಹಾರ ಹಕ್ಕನ್ನು ಅವಮಾನಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಜಿಲ್ಲೆಗಳು, ಹೊರ ರಾಜ್ಯಗಳಿಂದ ಆಗಮಿಸುವ ಸಾಹಿತ್ಯ ಪ್ರಿಯರಿಗೆ ಈಗಾಗಲೇ ಉತ್ತರ ಮತ್ತು ದಕ್ಷಿಣ ಕರ್ನಾಟಕ ಶೈಲಿಯ ಆಹಾರವನ್ನು ಉಣಬಡಿಸಲು ಆಹಾರ ಸಮಿತಿ ನಿರ್ಧರಿಸಿದೆ. ಆದರೆ, ಮಂಡ್ಯ ನೆಲದ ಆಹಾರ ಸಂಸ್ಕೃತಿಯಾದ ಮಾಂಸಾಹಾರ ಸೇವನೆಗೆ ಅವಕಾಶ ನೀಡದಿರುವುದು ಸರಿಯಲ್ಲ. ಅಲ್ಲದೆ, ಮಾಂಸಾಹಾರ ಸೇವನೆಯನ್ನು ಕೀಳಾಗಿ ಕಾಣುತ್ತಿರುವುದು ಒಪ್ಪುವಂತದ್ದಲ್ಲ. ಈ ಕಾರಣದಿಂದ ಸಮ್ಮೇಳನದಲ್ಲಿ ಕಡ್ಡಾಯವಾಗಿ ಬಾಡೂಟ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಇದುವರೆಗೂ ನಡೆದಿರುವ ಎಲ್ಲ ಸಮ್ಮೇಳನಗಳಲ್ಲೂ ಸಸ್ಯಾಹಾರವನ್ನು ಮಾತ್ರವೇ ನೀಡಲಾಗುತ್ತಿದ್ದು, ಆಯಾ ನೆಲದ ಸಂಸ್ಕೃತಿಗೆ ಅನುಗುಣವಾಗಿ ಆಹಾರವನ್ನು ಕೊಡಲಾಗಿದೆ. ಅದೇ ಪರಂಪರೆಯನ್ನು ಮಂಡ್ಯದಲ್ಲೂ ಮುಂದುವರಿಸುವುದಾಗಿ ಹೇಳುತ್ತಲೇ ಬಹುಜನರ ಆಹಾರ ಸಂಸ್ಕೃತಿಯಾದ ಮಾಂಸಾಹಾರ ಸೇವನೆಗೆ ತಡೆಯುಂಟು ಮಾಡುವ ಅಥವಾ ಸಮ್ಮೇಳನಗಳಲ್ಲಿ ಮಾಂಸಾಹಾರ ಸೇವನೆಗೆ ಅವಕಾಶ ನೀಡದಂತೆ ಮಡಿವಂತಿಕೆಯನ್ನು ಪಾಲಿಸುವ ಒಳತಂತ್ರಗಳು ನಡೆಯುತ್ತಿದೆ.
ಮಂಡ್ಯ ಭಾಗದ ಮುದ್ದೆ ಮತ್ತು ನಾಟಿಕೋಳಿ ಸಾರಿಗೆ ವಿಶೇಷ ಮಾನ್ಯತೆ ಇದ್ದು, ಈ ಆಹಾರ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಸಮ್ಮೇಳನದಲ್ಲಿ ಮಾಂಸಾಹಾರದ ಕಡ್ಡಾಯವನ್ನು ಒತ್ತಾಯಿಸುತ್ತಿದ್ದೀವೆಯೇ ವಿನಃ ಇದರಲ್ಲಿ ಸಸ್ಯಹಾರಿಗಳನ್ನು ಗುರಿಯಾಗಿಸುವ ಯಾವುದೇ ಉದ್ದೇಶವಿಲ್ಲ. ಅಲ್ಲದೆ, ಸಸ್ಯಹಾರಿಗಳಿಗೆ ಪ್ರಿಯವಾದ ಎಲ್ಲ ಬಗೆಯ ಭೋಜನಗಳನ್ನು ಸವಿಯಲು ಅವರಿಗೆ ಪ್ರತ್ಯೇಕ ಅವಕಾಶವಿರುವುದರಿಂದ ಮಾಂಸಪ್ರಿಯರಿಗೂ ಸಮ್ಮೇಳನ ಸಮಾನ ಆದ್ಯತೆ ನೀಡಬೇಕೆಂದು ಬಳಗದ ಸದಸ್ಯರು ಒತ್ತಾಯಿಸಿದರು.

ಮನವಿಗೆ ಸ್ಪಂದಿಸದಿದ್ದರೆ ಸ್ವಯಂ ಪ್ರೇರಿತ ಬಾಡೂಟದ ಚಿಂತನೆ
ಈಗಾಗಲೇ ಈ ಬಗ್ಗೆ ಜಿಲ್ಲಾಡಳಿತದ ಮತ್ತು ಸಮ್ಮೇಳನದ ಮುಖ್ಯಸ್ಥರ ಗಮನ ಸೆಳೆಯಲಾಗಿದ್ದು, ಡಿ.9ರಂದು ಜಿಲ್ಲಾಧಿಕಾರಿ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಆಹಾರ ಸಮಿತಿ ಅಧ್ಯಕ್ಷರು, ಸ್ವಾಗತ ಸಮಿತಿ ಅಧ್ಯಕ್ಷರು ಮತ್ತು ಪರಿಷತ್ ರಾಜ್ಯಾಧ್ಯಕ್ಷರ ಗಮನಕ್ಕೂ ತರಲಾಗುವುದು. ಒಂದು ವೇಳೆ ನಮ್ಮ ಒತ್ತಾಯಕ್ಕೆ ಸ್ಪಂದಿಸದಿದ್ದರೆ ಸ್ವಯಂ ಪ್ರೇರಿತವಾಗಿ ಸಮ್ಮೇಳನದ ಮೊದಲನೇ ದಿನ ಮೊಟ್ಟೆ ವಿತರಣೆ, ಎರಡನೇ ದಿನ ಮುದ್ದೆ ನಾಟಿ ಕೋಳಿ ಸಾಂಬಾರ್, ಮೂರನೇ ದಿನ ಬಿರಿಯಾನಿಯನ್ನು ವಿತರಿಸುವ ಚಿಂತನೆಯನ್ನು ನಡೆಸಲಾಗಿದೆ. ಇದಕ್ಕೆ ಪೂರಕವಾಗಿ ಮನೆಗೊಂದು ಕೋಳಿಯನ್ನು ಸಂಗ್ರಹಿಸುವ ಅಭಿಯಾನವನ್ನು ನಡೆಸುವುದಾಗಿ ಮುಖಂಡರು ಎಚ್ಚರಿಕೆ ನೀಡಿದರು.

ವಿವಿಧ ಸಂಘಟನೆಗಳ ಮುಖಂಡರಾದ ಟಿ.ಎಲ್.ಕೃಷ್ಣೇಗೌಡ, ಸಿ.ಕುಮಾರಿ, ಟಿ.ಡಿ.ನಾಗರಾಜು, ಸಿ.ಎಂ.ದ್ಯಾವಪ್ಪ, ಸಿ.ಆರ್.ರಮೇಶ್, ಎಲ್.ಸಂದೇಶ್, ಎಚ್.ಡಿ.ಜಯರಾಂ, ಎಂ.ಬಿ.ನಾಗಣ್ಣಗೌಡ, ಲಕ್ಷö್ಮಣ್ ಚೀರನಹಳ್ಳಿ, ಶಂಕರಲಿಂಗೇಗೌಡ, ಲಂಕೇಶ್, ಕೀಲಾರ ಸುರೇಶ, ಕೀಲಾರ ಕೃಷ್ಣೇಗೌಡ, ಟಿ.ಯಶ್ವಂತ್, ಸುಂಡಹಳ್ಳಿ ಮಂಜುನಾಥ್, ಚಂದಗಾಲು ವಿಜಯಕುಮಾರ್, ಸಂತೋಷ್, ನರಸಿಂಹಮೂರ್ತಿ, ಜಿ.ಎನ್.ಕೆಂಪರಾಜು, ಶಿವರಾಂ ಸೇರಿದಂತೆ ಮತ್ತಿತರರಿದ್ದರು.

Tags:
error: Content is protected !!