ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ವಯಂ ರಚಿತ ಪುಸ್ತಕಗಳ ಮಾರಾಟ ಮಳಿಗೆ ತೆರೆದಿದು, ಪುಸ್ತಕ ಪ್ರೇಮಿಗಳು ಪುಸ್ತಕ ಖರೀದಿಸಿ ಪ್ರೋತ್ಸಾಹಿಸಬೇಕು ಎಂದು ವಿಜಯಪುರ ಜಿಲ್ಲೆಯ ಲೇಖಕ ಭೀಮರಾಯ ಹೂಗಾರ ಮನವಿ ಮಾಡಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೇಖಕನಾಗಿ ಇದುವರೆಗೂ ೫೦ ಪುಸ್ತಕಗಳ ರಚನೆ ಮಾಡಿದ್ದು, ವಿಜಯಪುರ ಜಿಲ್ಲೆಯಿಂದ ಮಂಡ್ಯ ಜಿಲ್ಲೆಯವರೆಗೂ ೬೦೦ ಕಿಲೋ ಮೀಟರ್ ರಸ್ತೆಯುದ್ದಕ್ಕೂ ಸ್ಕೂಟರ್ ಮೂಲಕ ಪುಸ್ತಕಗಳ ಪ್ರಚಾರ ಮಾಡಿ ಸಮ್ಮೇಳನ ನಡೆಯುವ ಜಿಲ್ಲೆಯನ್ನು ತಲುಪಿದ್ದೇನೆ ಎಂದರು.
ಇಲ್ಲಿಯವರೆಗೆ ೫೦ ಪುಸ್ತಕ ಪ್ರಕಟಿಸಿರುವುದರ ಜೊತೆಗೆ ಒಂದು ಲಕ್ಷ ನುಡಿ ಮುತ್ತುಗಳನ್ನು ಬರೆದಿದ್ದೇನೆ. ಆನ್‌ಲೈನ್ ಹಾಗೂ ಸಾಹಿತ್ಯ ಸಮ್ಮೇಳನಗಳಲ್ಲಿ ಲಕ್ಷಾಂತರ ಪುಸ್ತಕಗಳ ಮಾರಾಟ ಮಾಡಿದ್ದೇನೆ. ಇದೀಗ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಲ್ಕು ಮಳಿಗೆಗಳಲ್ಲಿ ಪುಸ್ತಕ ಮಾರಾಟಕ್ಕೆ ಮುಂದಾಗಿದ್ದು, ಪುಸ್ತಕಕ್ಕೆ ಬೆಂಬಲ ನೀಡಬೇಕೆಂದು ಕೋರಿದರು.
ಗೋಷ್ಠಿಯಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಸ್.ಪಿ.ನಾರಾಯಣಸ್ವಾಮಿ ಇದ್ದರು.