ಮಂಡ್ಯ : ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ಕೊರತೆ ಇಲ್ಲ. ರೈತರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಹೇಳಿದರು.
ಶುಕ್ರವಾರ ಜಿಲ್ಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 5000 ಮೆಟ್ರಿಕ್ ಟನ್ ಯೂರಿಯಾ ದಾಸ್ತಾನಿದ್ದು, ಇನ್ನು ಕೆಲವೇ ದಿನದಲ್ಲಿ 1800 ಮೆ.ಟನ್ ಯೂರಿಯಾ ಬರಲಿದೆ. ಜಿಲ್ಲೆಯಲ್ಲಿ ಕೃಷಿ ಸಂಬಂಧಿಸಿದ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ರಸಗೊಬ್ಬರ ಮಾರಾಟಗಾರರು ತಮ್ಮಲ್ಲಿರುವ ಭೌತಿಕ ಹಾಗೂ ಆನ್ ಲೈನ್ ದಾಸ್ತಾನು ಒಂದೆ ರೀತಿ ಇರುವಂತೆ ನೋಡಿಕೊಳ್ಳಬೇಕು. ಮಾರಾಟವಾದ ತಕ್ಷಣ ನಮೂದಿಸಿದರೆ ಸರಿಯಾದ ಲೆಕ್ಕ ಸಿಗುತ್ತದೆ ಎಂದರು. ರಸಗೊಬ್ಬರದ ಕೃತಕ ಕೊರತೆ ಉಂಟಾಗುವ ರೀತಿ ಸನ್ನಿವೇಶ ಸೃಷ್ಠಿಸುವುದು, ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟಗಾರರು ತಮ್ಮ ಬಳಿ ಇರುವ ರಸಗೊಬ್ಬರ ಹಾಗೂ ದಾಸ್ತಾನು ವಿವರದ ಫಲಕವನ್ನು ಅನಾವರಣಗೊಳಿಸಬೇಕು. ರೈತರಿಗೆ ನ್ಯನೋ ಯೂರಿಯಾದ ಉಪಯುಕ್ತತೆ ಹಾಗೂ ಬಳಕೆಯ ಬಗ್ಗೆ ಕೃಷಿ ಅಧಿಕಾರಿಗಳು ಜಗೃತಿ ಮೂಡಿಸಬೇಕು ಎಂದರು. ತಹಶೀಲ್ದಾರ್ ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ನಿಯಮಿತವಾಗಿ ರಸಗೊಬ್ಬರ ಮಾರಾಟ ಅಂಗಡಿಗಳಿಗೆ ಹಾಗೂ ರೈತ ಚಟುವಟಿಕೆ ಇರುವ ಸ್ಥಳಗಳಿಗೆ ಭೇಟಿ ನೀಡಿ ಕೆಲಸಗಳು ನಿಯಮಾನುಸಾರ ನಡೆಯುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ ಎಂದರು.
ಯೂರಿಯಾ ರಸಗೊಬ್ಬರವನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಮಾಡುವುದನ್ನು ತಡೆಗಟ್ಟಲು ಉಪವಿಭಾಗಾಧಿಕಾರಿಗಳ ಮುಂದಾಳತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ತಂಡದಲ್ಲಿ ಕೈಗಾರಿಕಾ ಇಲಾಖೆ,ವಾಣಿಜ್ಯ ತೆರಿಗೆ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಸಹ ಕಾರ್ಯನಿರ್ವಹಿಸಲಿದ್ದಾರೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಅಕ್ರಮವಾಗಿ ಯುರಿಯಾ ದಾಸ್ತಾನು ಪ್ರಕರಣಗಳಿದ್ದಲ್ಲಿ ಕೃಷಿ ಅಧಿಕಾರಿಗಳು ಸ್ಥಳೀಯ ಪೊಲೀಸ್ ಅಧಿಕಾರಿಗಳ ಸಹಾಯ ಪಡೆದು ದಾಳಿ ನಡೆಸಿ ಎಂದರು. ರಸಗೊಬ್ಬರ ಮಾರಾಟ ಸಂದರ್ಭದಲ್ಲಿ ಕೆಲವು ಭಾಗದ ಅಂಗಡಿಗಳಲ್ಲಿ ಹೆಚ್ಚು ರೈತ ಗ್ರಾಹಕರಿದ್ದು, ನೂಕು ನುಗ್ಗಲು ಉಂಟಾಗುವ ಸಾಧ್ಯತೆ ಇರುತ್ತದೆ. ಮೊದಲೇ ಮಾಹಿತಿ ನೀಡಿ ಪೊಲೀಸ್ ಪೇದೆಗಳನ್ನು ನಿಯೋಜಿಸಿಕೊಂಡು ಯಾವುದೇ ಗೊಂದಲ ಉಂಟಾಗದಂತೆ ಕೆಲಸ ನಿರ್ವಹಿಸಿ ಎಂದರು. ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಆಗಸ್ಟ್ ಹಾಗೂ ಸೆಪ್ಟೆಂಬರ್ ಮಾಹೆಯಲ್ಲಿ ಯೂರಿಯಾ ಬೇಡಿಕೆ ಹೆಚ್ಚಿರುತ್ತದೆ. ಅಭಾವ ಉಂಟಾಗಬಹುದು ಎಂದು ಹೆಚ್ಚು ಖರೀದಿಸುವುದು, ಬೇರೆ ಜಿಲ್ಲೆಯವರು ಖರೀದಿಸುವ ಸಾಧ್ಯತೆ ಇರುತ್ತದೆ. ಇವುಗಳ ಬಗ್ಗೆ ಅಧಿಕಾರಿಗಳು ಹೆಚ್ಚು ನಿಗಾ ವಹಿಸಬೇಕು ಎಂದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಜಂಟಿ ಕೃಷಿ ನಿರ್ದೇಶಕ ಅಶೋಕ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ದಿನೇಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು





