ಮಂಡ್ಯ : ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವರ್ತಕರ ಮಾರುಕಟ್ಟೆಯ ಮಳಿಗೆಗಳನ್ನು ಹಲವು ವರ್ಷಗಳಿಂದ ಶ್ರಮವಹಿಸಿ ವ್ಯಾಪಾರ ಮಾಡಿಕೊಂಡು ಬರುತ್ತಿರುವಂತಹ ವರ್ತಕರಿಗೆ ಹಂಚಲಾಗುವು ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಕೇಂದ್ರ ಬೃಹತ್ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ .ಕುಮಾರಸ್ವಾಮಿ ಅವರು ಹೇಳಿದರು.
ಇಂದು (ಅ.16) ನಗರದ ಪೇಟೆ ಬೀದಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಮಾರುಕಟ್ಟೆ ಯನ್ನು ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಜನರ ಆಶೀರ್ವಾದದಿಂದ ಕೇಂದ್ರ ಇಂದು ಮಂತ್ರಿಯಾಗಿದ್ದೇನೆ ಅಂದಿನ ಇಲ್ಲಿಯವರೆಗೂ ಜಿಲ್ಲಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ, ಜಿಲ್ಲೆಯಲ್ಲಿ ಕಾರ್ಖಾನೆ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಕ್ತ ಜಾಗ ಗುರುತಿಸಲು ನಿರ್ದೇಶನ ನೀಡಿದ್ದೇನೆ ಎಂದರು.
ಮಂಡ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸ್ಥಳದ ಸಮಸ್ಯೆ ಇದೆ ಹಾಗೂ ಕಾರ್ಖಾನೆ ನಿರ್ಮಾಣ ಮಾಡಲು ಮೂಲಭೂತ ಸೌಕರ್ಯ ಒದಗಿಸುವ ಜವಾಬ್ದಾರಿ ಸರ್ಕಾರದ ಮೇಲೆ ಇದೆ, ಹಿಂದೆಯಲ್ಲ ಕೈಗಾರಿಕಾ ಸಂಸ್ಥೆಗಳಿಂದ ಜನರ ಆರ್ಥಿಕ ಸುಧಾರಣೆ ಸಾಧ್ಯವಾಗುತ್ತಿತ್ತು ಆದರೆ ಪ್ರಸ್ತುತ ಕೇಂದ್ರ ಬೃಹತ್ ಉಕ್ಕು ಮತ್ತು ಬೃಹತ್ ಕೈಗಾರಿಕಾ ವ್ಯಾಪ್ತಿಯಲ್ಲೇ ಸುಮಾರು 47 ಬೃಹತ್ ಕೈಗಾರಿಕೆಗಳು ಇವೆ ಆದರೆ ಲಾಭದಲ್ಲಿ ನಡೆಯುತ್ತಿರುವುದು ಬಿ ಎಚ್ ಇ ಎಲ್ ಸಂಸ್ಥೆ ಮಾತ್ರ, ಎಚ್ ಎಂ ಟಿ ಸಂಸ್ಥೆಯನ್ನು ಪ್ರಾರಂಭ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಇದನ್ನು ಓದಿ: RSS ಕಾರ್ಯಕ್ರಮದಲ್ಲಿ ಭಾಗಿಯಾದ ಸರ್ಕಾರಿ ನೌಕರರಿಗೆ ಸಂಕಷ್ಟ
ಪೂನಾ, ಬಾಂಬೆ ಅಂತಹ ನಗರಗಳಲ್ಲಿ ಅನೇಕ ಕೈಗಾರಿಕೆಗಳು ತಲೆ ಎತ್ತಿವೆ, ಅಂತಹಾ ಕಡೆ ಕೆಲಸ ನೀಡಲು ನಾವು ಸಿದ್ಧರಿದ್ದೇವೆ ಆದರೆ ಜಿಲ್ಲೆಯ ಯುವಕರು ಸ್ಥಳೀಯವಾಗಿ ಕೆಲಸ ಕೇಳುತ್ತಿದ್ದಾರೆ, ಜಿಲ್ಲೆಯಲ್ಲಿ ನಿರುದ್ಯೋಗ ಹೆಚ್ಚಾಗಲು ಇದೆ ಕಾರಣ, ಭದ್ರಾವತಿಯಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರು ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಲಾಗಿದ್ದ ಉಕ್ಕು ಕಾರ್ಖಾನೆ ಸ್ಥಗಿತಗೊಂಡಿದೆ ಇನ್ನೂ 3 ರಿಂದ ನಾಲ್ಕು ತಿಂಗಳುಗಳಲ್ಲಿ ಭದ್ರಾವತಿ ಉಕ್ಕಿನ ಕಾರ್ಖಾನೆ ಪ್ರಾರಂಭ ಮಾಡಲಿದ್ದೇವೆ, ಇದರಿಂದ 8 ರಿಂದ 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಭರವಸೆ ನೀಡಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಮಾತನಾಡಿ, ಮಂಡ್ಯ ಮಾರುಕಟ್ಟೆ ಶೀತಲ ವ್ಯವಸ್ಥೆಯಲ್ಲಿ ಇತ್ತು, ಕಳೆದ ಸರ್ಕಾರ ನೂತನ ಮಾರುಕಟ್ಟೆಯ ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಿತು, ನಮ್ಮ ಸರ್ಕಾರ ಬಂದ ನಂತರ ಕೇಂದ್ರ ಸರ್ಕಾರ, ನಗರಸಭೆಯ ಅನುದಾನದಿಂದ ಸುಮಾರು 10 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ನೂತನ ಮಾರುಕಟ್ಟೆ ಸ್ಥಾಪನೆಯನ್ನು ಮಾಡಲಾಗಿದೆ, ಹಿಂದೆ ಇದ್ದ ಲೀಸ್ಟ್ ಪ್ರಕಾರ ನ್ಯಾಯಯುತವಾಗಿ ಯಾವುದೇ ಒತ್ತಡಕ್ಕೂ ಮಣಿಯದೆ ಕೊಠಡಿಗಳನ್ನು ಇನ್ನೂ 15 ದಿನಗಳ ಒಳಗಾಗಿ ಹಂಚಿಕೆ ಮಾಡಲಾಗುವುದು, ಮಂಡ್ಯ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಬೇಕು, ಮಂಡ್ಯ ಸುತ್ತಮುತ್ತಲಿನಲ್ಲಿ ನೂರು ಎಕ್ಕರೆ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ, ಜಿಲ್ಲೆಯ ಯುವಕರಿಗೆ ಅನುಕೂಲವಾಗುವಂತೆ ಕೈಗಾರಿಕೆಗಳನ್ನು ಇಲ್ಲಿ ಸ್ಥಾಪಿಸಿ ಕೊಡಿ ಎಂದು ಕೇಂದ್ರ ಬೃಹತ್ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ .ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರು.
ನಗರ ಸಭೆ ಅಧ್ಯಕ್ಷ ಎಂ ವಿ ಪ್ರಕಾಶ್ ಮಾತನಾಡಿ, ಜಿಲ್ಲೆಯ ಮಾರುಕಟ್ಟೆಯನ್ನು ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರು 1951 ರಲ್ಲಿ ಶಂಕುಸ್ಥಾಪನೆ ಮಾಡಿದ್ದಾರೆ, 1960 ರಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಬಿ.ಡಿ ಜಡ್ತಿ ಅವರಿಂದ ಉದ್ಘಾಟನೆ ಆಗಿದೆ, ಸದರಿ ಮಾರುಕಟ್ಟೆ ಜಿಲ್ಲೆಯ ಹಳೆಯ ಮತ್ತು ದೊಡ್ಡ ಮಾರುಕಟ್ಟೆಯಾಗಿದೆ, ಸುಮಾರು 10.21 ಕೋಟಿ ಅನುದಾನದಲ್ಲಿ ನೂತನ ಮಾರುಕಟ್ಟೆನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್, ನಗರಸಭೆ ಅಧ್ಯಕ್ಷ ಎಂ ವಿ ಪ್ರಕಾಶ್, ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಗರಸಭೆ ಪೌರಾಯುಕ್ತೆ ಪಂಪಶ್ರೀ, ಮುಡಾ ಅಧ್ಯಕ್ಷ ನಯೀಮ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





