Mysore
23
overcast clouds

Social Media

ಸೋಮವಾರ, 31 ಆಗಸ್ಟ್ 2026
Light
Dark

ಮಂಡ್ಯ | ಜೈಲಿನಲ್ಲಿ ದುಡ್ಡು ಕೊಟ್ಟರೆ ರಾಜಾತಿಥ್ಯ ಆರೋಪ ; ಕಾರಾಗೃಹದ ಅದೀಕ್ಷಕಿ ವರ್ಗಾವಣೆ

ಕಾರಾಗೃಹದ ಅಧೀಕ್ಷಕಿ ಎಂ.ಶಾಂತಮ್ಮ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ
ಮಂಡ್ಯ: ವಿಚಾರಣಾಧೀನ ಕೈದಿ ಶ್ರೀರಂಗಪಟ್ಟಣ ಎಡಿಎಲ್‌ಆರ್ ಮೊಹಮದ್ ಹುಸೇನ್‌ಗೆ ಅನಧಿಕೃತ ಚಿಕಿತ್ಸೆ ಹಾಗೂ ಜೈಲಿನಲ್ಲಿ ದುಡ್ಡು ಕೊಟ್ಟರೆ ರಾಜಾತಿಥ್ಯ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಎಂ.ಶಾಂತಮ್ಮ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಿ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ಕುಮಾರ್ ಆದೇಶಿಸಿದ್ದಾರೆ.
ಸರ್ಕಾರಿ ನಕಲಿ ದಾಖಲೆ ಸೃಷ್ಟಿಸಿದ ಖಾಸಗಿ ವ್ಯಕ್ತಿಗೆ ಸಹಕರಿಸಿದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಎಡಿಎಲ್‌ಆರ್ ಮೊಹಮದ್ ಹುಸೇನ್‌ಗೆ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಈ ಸಮಯದಲ್ಲಿ ಯಾವುದೇ ರೋಗವಿಲ್ಲದಿದ್ದರೂ ಆರೋಪಿಗೆ ಮಿಮ್ಸ್ನಲ್ಲಿ ಅನಧಿಕೃತ ಚಿಕಿತ್ಸೆ ನೀಡಿದ ಆರೋಪ ಹಾಗೂ ಜೈಲಿನಲ್ಲಿ ಹಣ ನೀಡಿದರೆ ರಾಜಾತಿಥ್ಯ ಸಿಗಲಿದೆ ಎಂದು ವಿಚಾರಣಾಧೀನ ಕೈದಿಗಳು ಬರೆದಿದ್ದರು ಎನ್ನಲಾದ ಪತ್ರ ವೈರಲ್ ಆದ ಬೆನ್ನಲ್ಲೇ ಈ ಆದೇಶ ಹೊರ ಬಿದ್ದಿದೆ.
ಜಿಲ್ಲಾ ಕಾರಾಗೃಹ ವಾಸಿಯಾಗಿರುವ ಪ್ರಕರಣವೊಂದರ ವಿಚಾರಣಾಧೀನ ಕೈದಿ ಮಹಮದ್ ಹುಸೇನ್ ಎಂಬ ಅಧಿಕಾರಿಗೆ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಗೆಳತಿಯೊಂದಿಗೆ ಕಾಲ ಕಳೆಯಲು ಅವಕಾಶ ಮಾಡಿಕೊಟ್ಟಿದ್ದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶರ ತಂಡ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ವೇಳೆ ಆರೋಪಿ ಆಸ್ಪತ್ರೆಯ ಕೊಠಡಿಯಲ್ಲಿ ಗೆಳತಿಯೊಂದಿಗೆ ಇದ್ದದ್ದು ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಕಾರಾಗೃಹದ ಅಧೀಕ್ಷಕರ ಕರ್ತವ್ಯಲೋಪ ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಶಾಂತಮ್ಮ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವಿಶೇಷ ಕರ್ತವ್ಯದ ಮೇಲೆ ನಿಯೋಜಿಸಿ ಆದೇಶಿಸಲಾಗಿದೆ. ಶಾಂತಮ್ಮ ಅವರಿಂದ ತೆರವಾದ ಸ್ಥಾನಕ್ಕೆ ಫಕೀರಪ್ಪ ಬಾರಕೇರ್ ಅವರನ್ನು ನಿಯೋಜಿಸಲಾಗಿದೆ.

Tags:
error: Content is protected !!