ಮಂಡ್ಯ: ಟ್ರಾಕ್ಟರ್‌ನಿಂದ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಕೆಇಬಿ ಕಚೇರಿ ಮುಂಭಾಗ ಮಂಗಳವಾರ ನಡೆದಿದೆ.
ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಕುಮಾರ (48) ಎಂಬುವರೇ ಮೃತಪಟ್ಟ ದುರ್ದೈವಿ.
ರಾಗಿಮುದ್ದನಹಳ್ಳಿ ಗ್ರಾಮದಿಂದ ಮಂಡ್ಯಕ್ಕೆ ಬರುತ್ತಿದ್ದ ಟ್ರಾಕ್ಟರ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಮೇಲೆ ಹತ್ತಿದೆ. ಇದರಿಂದ ಗಾಬರಿಗೊಂಡ ಕುಮಾರ ಟ್ರಾಕ್ಟರ್‌ನಿಂದ ಜಿಗಿದು ಪಾರಾಗಲು ಯತ್ನಿಸಿದ್ದಾರೆ. ಈ ವೇಳೆ ಟ್ರಾಕ್ಟರ್‌ನ ಚಕ್ರಕ್ಕೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.