ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ ಬರ ಪರಿಶೀಲನೆ ನಡೆಸಿದರು.
ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯ ಡಾ. ನವೀನ್ ಕುಮಾರ್ ಜೈನ್ ನೇತೃತ್ವದ ಅಧಿಕಾರಿಗಳ ತಂಡವು ಮೊದಲಿಗೆ ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಭೇಟಿ ನೀಡಿ ಜಲಾಶಯದ ಒಳಹರಿವು ಹಾಗೂ ಹೊರಹರಿವಿನ ಪ್ರಮಾಣದ ಬಗ್ಗೆಯೂ ಪರಿಶೀಲನೆ ನಡೆಸಿತು. ಬಳಿಕ ಕೆಆರ್‌ಎಸ್ ಜಲಾಶಯದ ಪ್ರಸ್ತುತ ನೀರಿನ ಮಟ್ಟದ ಬಗ್ಗೆ ಮಾಹಿತಿ ಪಡೆದರು. ಬಳಿಕ ಮಂಡ್ಯ ಜಿಲ್ಲೆಯ ಬರಪೀಡಿತ ಹಳ್ಳಿಗಳಿಗೂ ಭೇಟಿ ನೀಡಿದ ಅಧಿಕಾರಿಗಳ ತಂಡ ಬರದಿಂದ ಉಂಟಾಗಿರುವ ಪರಿಸ್ಥಿತಿ, ರೈತರ ಸಮಸ್ಯೆಗಳು ಹಾಗೂ ಬೆಳೆ ನಷ್ಟದ ಕುರಿತು ಪರಿಶೀಲನೆ ನಡೆಸಿತು.
ಇನ್ನು ಮಂಡ್ಯ ಜಿಲ್ಲೆಯ ಬರ ಪರಿಸ್ಥಿತಿಯ ಸಮಗ್ರ ಅಧ್ಯಯನ ನಡೆಸಲಿರುವ ಅಧಿಕಾರಿಗಳ ತಂಡ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆಯಿದೆ.




