ಮಂಡ್ಯ: ರಾಜ್ಯಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ವಿಕಸಿತ ಭಾರತ ಸೃಷ್ಠಿಸುವ ನಿಟ್ಟಿನಲ್ಲಿ ಅಭಿಯಾನದ ಮೂಲಕ ಮಂಡ್ಯ ಜಿಲ್ಲೆಯ ಜನತೆ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ನವೀನ್‌ಕುಮಾರ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲು ಜನರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ, ಆದ್ದರಿಂದ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದು, ಆಸಕ್ತ ಜನತೆ ಪಕ್ಷಕ್ಕೆ ಸೇರ್ಪಡೆಗೊಂಡು ಅಭಿವೃದ್ಧಿಗೆ ಸಹಕರಿಸಬೇಕೆಂದು ಕೇಳಿಕೊಂಡರು.
ರಾಜ್ಯದಲ್ಲಿ ೧೫ ಹಾಲು ಒಕ್ಕೂಟಗಳಿದ್ದು, ೨೬.೮೯ ಲಕ್ಷ ಹಾಲು ಉತ್ಪಾದಕರಿದ್ದು, ೫೦ ಲಕ್ಷ ಹಾಲು ಉತ್ಪಾದನೆಯಾಗುತ್ತಿದ್ದು, ೭೦ ಉಪ ಉತ್ಪನ್ನಗಳನ್ನು ಮಾಡುತ್ತಿದ್ದು, ಒಕ್ಕೂಟಗಳು ಹಾಲು ಉತ್ಪಾದಕರಿಗೆ ಲೀಟರ್‌ಗೆ ನೀಡುವ ಹಣದಲ್ಲಿ ೧ ರಿಂದ ೨ ರೂ ಕಡಿತಗೊಳಿಸುತ್ತಿದ್ದು, ರಾಜಕೀಯ ಪ್ರೇರಿತ ಆಡಳಿತ ಮಂಡಳಿ, ಸ್ಪರ್ಧಾತ್ಮಕ ಮನೋಭಾವ ಇಲ್ಲದಿರುವುದು, ಮಾರುಕಟ್ಟೆಯಲ್ಲಿ ಅಸ್ಥಿತ್ವ ಉಳಿಸಕೊಳ್ಳುವಲ್ಲಿ ಪ್ರಯತ್ನ ನಡೆಯದ ಕಾರಣ ಹಾಲು ಉತ್ಪಾದಕರಿಗೆ ಹೊರೆ ಹೇರಲಾಗುತ್ತಿದ್ದು, ಒಕ್ಕೂಟಗಳು ಭ್ರಷ್ಠಾಚಾರದ ಕೂಪಗಳಾಗಿವೆ ಎಂದು ದೂಡಿದರು.
೨೦೨೩ರಲ್ಲಿ ಕಾಂಗ್ರೆಸ್ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ೨ ರೂ ಪ್ರೋತ್ಸಾಹ ಧನ ನೀಡುವುದಾಗಿ ಭರವಸೆ ನೀಡಿ ಇಂದಿಗೂ ಭರವಸೆ ಇಡೇರಿಸಿಲ್ಲ,೨೦೨೪ರ ಮೇ ಮಾಹೆಯಿಂದ ರೈತರಿಗೆ ನೀಡಬೇಕಾದ ೫ ರೂ ಪ್ರೋತ್ಸಾಹ ಹಣವನ್ನು ನೀಡಿಲ್ಲ, ಇಂದು ಒಂದು ಲೀಟರ್ ಹಾಲು ಉತ್ಪಾದನೆ ಮಾಡಲು ೨೬-೨೮ ರೂ ಖರ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಕಾಳಜಿ ವಹಿಸದ ಸರ್ಕಾರದ ಕ್ರಮವನ್ನು ವಿರೋಧಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ರೈತ ಮೋಚಾ ಜಿಲ್ಲಾಧ್ಯಕ್ಷ ಅಶೊಕ್ ಜಯರಾಂ ಮಾತನಾಡಿ, ಬಿಜೆಪಿ ಸದಸ್ಯತ್ವ ಅಭಿಯಾನ ಇಂದು ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ೫೦ ಮಂದಿ ಸಕ್ರಿಯ ಸದಸ್ಯರು ನೋಂದಣಿ ಮಾಡಿಸಿಕೊಂಡಿದ್ದರೆ, ಅಭಿಯಾನ ಒಂದು ವಾರದ ಕಾಲ ನಡೆಯಲಿದ್ದು, ಅಂತ್ಯದ ವೇಳೆಗೆ ಜಿಲ್ಲೆಯಿಂದ ೨ ಲಕ್ಷ ಮಂದಿ ನೊಂದಣಿ ಮಾಡಿಸಿಕೊಳ್ಳುವ ನಿರೀಕ್ಷೆಯನ್ನು ಹೊಂದಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಜವರೇಗೌಡ, ಜಿಲ್ಲಾ ಕಾರ್ಯದರ್ಶಿ ವೈರಮುಡಿಗೌಡ, ಜೋಗಿಗೌಡ ಇದ್ದರು.





