ಮಳವಳ್ಳಿ: ತಾಲೂಕಿನ ಕೆರೆ ಕಟ್ಟೆಗಳಿಗೆ ನೀರು ತುಂಬಿಸದೆ ಗಗನಚುಕ್ಕಿ ಚಲಪಾತೋತ್ಸವ ಆಚರಿಸುತ್ತಿರುವ ಸರ್ಕಾರ ಹಾಗೂ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಸಿಎಂ ಸಿದ್ದರಾಮಯ್ಯ ಆಗಮನದ ವೇಳೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ಜೆಡಿಎಸ್ ಮಾಜಿ ಶಾಸಕ ಅನ್ನದಾನಿ ಹಾಗೂ ಜೆಡಿಎಸ್-ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಘಟನೆ ಶನಿವಾರ ಜರುಗಿತು.
ಕಳೆದ ಎರಡು ವಾರದ ಹಿಂದೆಯೇ ತಾಲೂಕಿನ ಕೆರೆ ಕಟ್ಟೆಗಳಿಗೆ ನೀರು ತುಂಬಿಸದಿದ್ದರೆ ಸಿಎಂ ಆಗಮನದ ವೇಳೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಅನ್ನದಾನಿ ಅವರು ಎಚ್ಚರಿಸಿದ್ದರು. ಅದರಂತೆ ಮಳವಳ್ಳಿ ಪಟ್ಟಣದಲ್ಲಿ ಪ್ರತಿಭಟನೆ ಸುಳಿವು ಅರಿತ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಮಾಜಿ ಶಾಸಕ ಅನ್ನದಾನಿ ನೇತೃತ್ವದ ಕಾರ್ಯಕರ್ತರು ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ಪೊಲೀಸರು ಮಾಜಿ ಶಾಸಕ ಸೇರಿದಂತೆ ಎಲ್ಲಾ ಪ್ರತಿಭಟನಾಕಾರರನ್ನು ಬಂಧಿಸಿ ಬಸ್ಸುಗಳಲ್ಲಿ ಕರೆದೊಯ್ದರು.