ಮಂಡ್ಯ : ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅತಿವೇಗವಾಗಿ ಸಾಗುತ್ತಿದ್ದ ಕಾರು ಸರ್ವಿಸ್ ರಸ್ತೆಗೆ ಹಾಕಲಾಗಿರುವ ಜಾಲರಿಗೆ ಡಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ ಯುವಕನೋರ್ವ ಮೃತಪಟ್ಟು, ಕಾರಿನ ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಇಂಡುವಾಳು ಸಮೀಪ ನಡೆದಿದೆ.
ಘಟನೆಯಲ್ಲಿ ಬೆಂಗಳೂರಿನ ಚಿನ್ನಣ್ಣ ಲೇಔಟ್‌ನ ನಿವಾಸಿ ಲೇ. ಸುರೇಂದ್ರ ಪ್ರಕಾಶ್ ಅವರ ಪುತ್ರ ತುಷಾರ್ ಪ್ರಕಾಶ್ (೨೦) ಮೃತ ಯುವಕನಾಗಿದ್ದು, ಕಾರಿನ ಚಾಲಕ ಪವನ್ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅ.೧ರ ಬುಧವಾರ ತಡರಾತ್ರಿ ದಸರಾ ನೋಡಲೆಂದು ಮೃತ ತುಷಾರ್ ಪ್ರಕಾಶ್ ಹಾಗೂ ಪವನ್ ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದಾರೆ. ಕಾರನ್ನು ಅತಿವೇಗವಾಗಿ ಚಾಲನೆ ಮಾಡುತ್ತಿದ್ದ ಪವನ್ ಮಂಡ್ಯ ತಾಲ್ಲೂಕು ಇಂಡುವಾಳು ಸಮೀಪ ಬರುತ್ತಿದ್ದಂತೆ ೧.೫೦ರ ಸಮಯದಲ್ಲಿ ಕಾರಿನ ನಿಯಂತ್ರಣ ಕಳೆದುಕೊಂಡ ಚಾಲಕ ಪವನ್ ಸರ್ವಿಸ್ ರಸ್ತೆಗೆ ಅಡ್ಡಲಾಗಿ ಹಾಕಿರುವ ಕಬ್ಬಿಣದ ಜಾಲರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ.
ಇದನ್ನು ಓದಿ : ಮೈಸೂರು| ಸಾರಿಗೆ ಬಸ್ ಹಾಗೂ ಎರಡು ಕಾರುಗಳ ನಡುವೆ ಸರಣಿ ಅಪಘಾತ
ಈ ಘಟನೆಯಿಂದಾಗಿ ತುಷಾರ್ ಪ್ರಕಾಶ್ ಸ್ಥಳದಲ್ಲೇ ಮೃತಪಟ್ಟರೆ, ಚಾಲಕ ಪವನ್ ತೀವ್ರವಾಗಿ ಗಾಯಗೊಂಡನು. ಕಾರು ಹೆದ್ದಾರಿಯಲ್ಲೇ ಉರುಳಿಬಿದ್ದ ಪರಿಣಾಮ ಕೆಲ ಸಮಯ ಸಂಚಾರದಲ್ಲಿ ಅಸ್ತವ್ಯಸ್ತವಾಯಿತು.
ಅಪಘಾತದ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಮಂಡ್ಯ ಗ್ರಾಮಾಂತರ ಠಾಣೆಯ ಪೊಲೀಸರು, ಮೃತ ಯುವ ತುಷಾರ್ ಪ್ರಕಾಶ್ ಮೃತ ದೇಹ ಹಾಗೂ ತೀವ್ರವಾಗಿ ಗಾಯಗೊಂಡಿದ್ದ ಪವನ್‌ನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಗಾಯಾಳು ಪವನ್‌ಗೆ ಪ್ರಥಮ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆಯ ಪೊಲೀಸರು, ಮುಂದಿನ ತನಿಖೆ ಕೈಗೊಂಡಿದ್ದಾರೆ.





