ಮಂಡ್ಯ : ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಬ ದೇವಸ್ಥಾನದಲ್ಲಿ ಫೆ.1 ರಂದು ನಡೆಯಲಿರುವ ಮಾಘ ಶುದ್ಧ ಹುಣ್ಣಿಮೆಯ ಪ್ರಯುಕ್ತ ಹೆಚ್ಚು ಸಾರ್ವಜನಿಕರು ಸೇರುವ ಸಾಧ್ಯತೆ ಇದ್ದು, ಸದರಿ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸೆಸ್ಕ್ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ಎ.ಬಿ. ರಮೇಶ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಾಘ ಶುದ್ಧ ಪೌರ್ಣಮಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾಘ ಶುದ್ಧ ಹುಣ್ಣಿಮೆಯ ಪ್ರಯುಕ್ತ ನಿಮಿಷಾಂಬ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿದ್ದು, ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ನಿರೀಕ್ಷೆಯಲ್ಲಿ ಇದೆ. ಸೂಕ್ತ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಭಕ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ದೇವಸ್ಥಾನಕ್ಕೆ ಬರುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮೊಜೊ ಬ್ಯಾರಿಕೇಡ್ ಹಾಕಿಸಿ ಹಾಗೂ ದೇವರ ದರ್ಶನಕ್ಕೆ ಬ್ಯಾರಿಕೇಡ್ ಅಳವಡಿಸಿ ಭಕ್ತರು ಸರಾಗವಾಗಿ ದೇವರ ದರ್ಶನ ಪಡೆಯುವಂತೆ ಕ್ರಮವಹಿಸಿ. ಕಾವೇರಿ ನದಿಯಲ್ಲಿ ಸ್ನಾನ ಮಾಡಿದ ನಂತರ ಭಕ್ತರು ಬಟ್ಟೆ ಬದಲಾಯಿಸಲು ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಕೋಣೆ ತೆರೆಯಬೇಕು ಹಾಗೂ ಮಹಿಳೆಯರು ಬಟ್ಟೆ ಬದಲಾಯಿಸುವ ಸ್ಥಳದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಹೇಳಿದರು.
ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಕಣ್ಗಾವಲು
ಭಕ್ತರ ಭದ್ರತಾ ದೃಷ್ಟಿಯಿಂದ ಕಾವೇರಿ ನದಿಯಲ್ಲಿ ಭಕ್ತರು ಸ್ನಾನ ಮಾಡುವ ಕಡೆ ಹಾಗೂ ನಿಮಿಷಾಂಬ ದೇವಾಲಯದಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ತಾತ್ಕಾಲಿಕ ಸಿಸಿ ಟಿವಿಗಳನ್ನು ಅಳವಡಿಸಿ ಎಂದು ತಿಳಿಸಿದರು.
ದೇವಾಲಯದ ಸುತ್ತಲೂ ದೀಪಾಲಂಕಾರ
ದೇವಸ್ಥಾನದ ಸುತ್ತಲೂ ಸೂಕ್ತ ದೀಪಾಲಂಕಾರಗಳ ವ್ಯವಸ್ಥೆ ಕಲ್ಪಿಸಿ. ರಾತ್ರಿಯ ವೇಳೆಯೂ ಭಕ್ತರು ದೇವಾಲಯಕ್ಕೆ ಬರುವುದರಿಂದ ಬೆಳಕಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಹಾಗೂ ವಿದ್ಯುತ್ ಸಂಪರ್ಕವನ್ನು ನಿರಂತರವಾಗಿ ನೀಡಬೇಕು. ತುರ್ತು ಸಂದರ್ಭದಲ್ಲಿ ಜನರೇಟರ್ ಅನ್ನು ಇಟ್ಟಿರಬೇಕು ಎಂದು ಹೇಳಿದರು.
ತುರ್ತು ಸೇವೆಗಳು
ಫೆ.1 ರಂದು ಹೆಚ್ಚು ಭಕ್ತರು ಸೇರುವುದರಿಂದ ತುರ್ತು ಸೇವೆಗಳನ್ನು ಒದಗಿಸಬೇಕು. ದೇವಸ್ಥಾನದ ಸಮೀಪದಲ್ಲಿಯೇ ಅಗ್ನಿಶಾಮಕ ದಳ, ಅಗತ್ಯ ಔಷಧಗಳೊಂದಿಗೆ ತಾತ್ಕಾಲಿಕ ಆರೋಗ್ಯ ಕೇಂದ್ರ ಮತ್ತು ಆಂಬುಲೆನ್ಸ್ ಸೇವೆ, ಭಕ್ತರು ಸ್ನಾನ ಮಾಡುವ ಸ್ಥಳದಲ್ಲಿ ನುರಿತ ಈಜುಗಾರರ ತಂಡ ಸಿದ್ಧವಾಗಿರಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ, ದೇವಾಲಯಕ್ಕೆ ಬರುವ ಭಕ್ತರ ವಾಹನಗಳನ್ನು ದೇವಸ್ಥಾನದ ಹತ್ತಿರಕ್ಕೆ ಬಿಡದೆ ನಿಗದಿತ ದೂರದಲ್ಲಿ ಸೂಕ್ತ ಸ್ಥಳ ಗುರುತಿಸಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಭಕ್ತರ ನೂಕು ನುಗ್ಗಲು ತಪ್ಪಿಸಲು ಅಗತ್ಯ ಬ್ಯಾರಿಕೇಡ್ ವ್ಯವಸ್ಥೆಯನ್ನು ಮಾಡಬೇಕು. ವಾಹನಗಳಿಗೆ ಮಾರ್ಗ ಸೂಚನಾಫಲಕ, ಪಾರ್ಕಿಂಗ್ ಫಲಕಗಳನ್ನು ಅಳವಡಿಸುವಂತೆ ಹೇಳಿದರು.
ನಗರದ ಪ್ರಮುಖ ಸ್ಥಳಗಳನ್ನು ಗುರುತಿಸಿ ರಾತ್ರಿ ವೇಳೆಯಲ್ಲಿ ವಿದ್ಯುತ್ ದೀಪಾಲಂಕಾರ ವ್ಯವಸ್ಥೆಯನ್ನು ಮಾಡುವಂತೆ ಹಾಗೂ ನಿರಂತರವಾಗಿ ವಿದ್ಯುತ್ ವ್ಯವಸ್ಥೆ ಮಾಡಬೇಕು, ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕು ಮತ್ತು ತಾತ್ಕಾಲಿಕ ಬಯೋ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ಅಧಿಕ್ಷಕಿ ವಿ.ಜೆ. ಶೋಭಾರಾಣಿ ಮಾತನಾಡಿ, ನಿಮಿಷಾಂಬ ದೇವಾಲಯಕ್ಕೆ ಭಕ್ತರು ಬರಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು. ಶ್ರೀರಂಗಪಟ್ಟಣದಿಂದ ಗಂಜಾಂವರೆಗೆ ನಿಗದಿತ ಅವಽಯೊಳಗೆ ಬಸ್‌ಗಳು ಸಂಚಾರ ಮಾಡಲು ಸೂಕ್ತ ಕ್ರಮಕೈಗೊಳ್ಳಬೇಕು. ದೇವಸ್ಥಾನ ಆವರಣದಲ್ಲಿ ಧೂಳನ್ನು ನಿಯಂತ್ರಿಸಲು ಟ್ಯಾಂಕರ್ ಮೂಲಕ ನೀರನ್ನು ಸಿಂಪಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ಶ್ರೀರಂಗಪಟ್ಟಣ ತಹಸಿಲ್ದಾರ್ ಚೇತನ ಯಾದವ್, ಮುಜರಾಯಿ ಇಲಾಖೆಯ ತಹಸಿಲ್ದಾರ್ ತಮ್ಮೇಗೌಡ, ಜಿಲ್ಲಾಧಿಕಾರಿ ಕಚೇರಿಯ ತಹಸಿಲ್ದಾರ್ ರವಿ ಶಂಕರ್, ನಿಮಿಷಾಂಬ ದೇವಾಲಯದ ಆಡಳಿತ ವರ್ಗದ ಸಿಬ್ಬಂದಿ ಭಾಗವಹಿಸಿದ್ದರು.





