ಮಂಡ್ಯ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಮನೆಯವರೇ ಹೊಡೆದು ನೇಣು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹರ್ಷಿತಾ ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ.
ಕಳೆದ ಎಂಟು ವರ್ಷಗಳ ಹಿಂದೆ ಹರ್ಷಿತಾ ಹಾಗೂ ನಂದೀಶ್ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳೂ ಕೂಡ ಇದ್ದರು. ಇದ್ದಕ್ಕಿದ್ದಂತೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಹರ್ಷಿತಾ ಮೃತದೇಹ ಪತ್ತೆಯಾಗಿದ್ದು, ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಹರ್ಷಿತಾ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನು ಓದಿ: ಗಬ್ಬು ನಾರುತ್ತಿದೆ ಗುಂಡ್ಲುಪೇಟೆ ಎಪಿಎಂಸಿ
ಪತಿ ನಂದೀಶ್ ಪದೇ ಪದೇ ಹರ್ಷಿತಾಗೆ ವರದಕ್ಷಿಣೆ ತರುವಂತೆ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಿರುವ ಪೋಷಕರು, ಇದುವರೆಗೂ 150 ಗ್ರಾಂ ಚಿನ್ನ, ಎರಡು ಲಕ್ಷ ರೂ ಹಣ ನೀಡಿದ್ದೇವೆ. ಆದರೂ ಕಿರುಕುಳ ನಿಂತಿರಲಿಲ್ಲ. ಹೀಗಾಗಿ ಅವರೇ ನಮ್ಮ ಮಗಳನ್ನು ಹೊಡೆದು ಸಾಯಿಸಿ ನೇಣು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.





